ಗಡಿ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

ಹರಪನಹಳ್ಳಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನೆ

ಹರಪನಹಳ್ಳಿ, ಫೆ.11 – ತಾಲ್ಲೂಕಿನ ಗಡಿ ಭಾಗದ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಸಾರಿಗೆ ಸಂಸ್ಥೆಯ ಹರಪನಹಳ್ಳಿ ಘಟಕದ ಘಟಕ ವ್ಯವಸ್ಥಾಪಕ ವಿನಾಯಕ ಅವರಿಗೆ ಮನವಿ ಸಲ್ಲಿಸಿದರು.

 ಈ ವೇಳೆ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯ ಮುಖಂಡ ಕೆರೆ ಗುಡಿಹಳ್ಳಿ ಹಾಲೇಶ್ ಮಾತನಾಡಿ, ತಾಲ್ಲೂಕಿನ ಗಡಿಭಾಗದ ಹಳ್ಳಿಗಳಾದ ರಾಮಘಟ್ಟ, ರಾಮ ಘಟ್ಟದ ತಾಂಡಾ, ಮಾದಿಹಳ್ಳಿ, ಗಡಿಗುಡಾಳು, ಬೂದಿಹಾಳು, ಹೊಸಕೋಟೆ, ಚಿಕ್ಕಬಳ್ಳಿ, ಕೆರೆ ಗುಡಿಹಳ್ಳಿ, ಚಟ್ನಿಹಳ್ಳಿ, ಅಣಜಿಗೇರಿ, ಗ್ರಾಮ ಗಳಿಂದ ದಿನನಿತ್ಯ ನೂರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ರೈತರು ಕಾರ್ಮಿಕರು ಮಹಿಳೆಯರು ಅಂಗವಿಕಲರು ದೈನಂದಿನ ಕೆಲಸಕ್ಕಾಗಿ ಹರಪನಹಳ್ಳಿಗೆ ಬರುತ್ತಾರೆ. ಆದರೆ ಈ ಹಳ್ಳಿಗಳಿಗೆ ಯಾವುದೇ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿ ಕಷ್ಟಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯ ಮುಖಂಡ ಬಳಿಗಾನೂರು ಕೊಟ್ರೇಶ್ ಮಾತನಾಡಿ, ಈ ಹಿಂದೆ ಬೆಳಿಗ್ಗೆ ಎಂಟಕ್ಕೆ ಉಚ್ಚಂಗಿದುರ್ಗವನ್ನು ಬಿಟ್ಟು ಮಾದಿಹಳ್ಳಿ, ಗಡಿ ಗುಡಾಳ್ ಬೂದಿಹಾಳು, ಹೊಸಕೋಟೆ, ಚಿಕ್ಕಬಳ್ಳಿ, ಕೆರೆಗುಡಿಹಳ್ಳಿ, ಮಾರ್ಗವಾಗಿ ಅರಸೀಕೆರೆಗೆ ಬಂದು ಹರಪನಹಳ್ಳಿಗೆ ತಲುಪುವ ಸಾರಿಗೆ ಸೌಕರ್ಯವಿತ್ತು. ಮಹಾಮಾರಿ ಕೋವಿಡ್ 19 ಪರಿಣಾಮವಾಗಿ ಸಾರಿಗೆ ಸೌಕರ್ಯ ಬಂದ್ ಆಗಿತ್ತು. ನಂತರದ ದಿನಗಳಲ್ಲಿ ಶಾಲಾ – ಕಾಲೇಜುಗಳು ಪ್ರಾರಂಭವಾಗಿ ಮತ್ತು ದಿನನಿತ್ಯದ ಜನರ ಕೆಲಸ ಪ್ರಾರಂಭವಾಗಿವೆ. ಕೆಲಸಗಳಿಗೆ ಹರಪನಹಳ್ಳಿ ಪಟ್ಟಣಕ್ಕೆ ಬರಲು ಸಾರಿಗೆ ಸೌಕರ್ಯವಿಲ್ಲದೆ ಜನರು ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಹೇಳಿದರು. 

ಹರಪನಹಳ್ಳಿ ಘಟಕದ ಘಟಕ ವ್ಯವಸ್ಥಾಪಕರು ಉಚ್ಚಂಗಿದುರ್ಗವನ್ನು ಬಿಟ್ಟು ಮಾದಿಹಳ್ಳಿ, ಗಡಿಗುಡಾಳ್, ಬೂದಿಹಾಳು, ಹೊಸಕೋಟೆ, ಚಿಕ್ಕಬಳ್ಳಿ, ಕೆರೆಗುಡಿಹಳ್ಳಿ, ಮಾರ್ಗವಾಗಿ ಅರಸೀಕೆರೆಗೆ ಬಂದು ಹರಪನ ಹಳ್ಳಿಗೆ ತಲುಪುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಹೇಳಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ಮುಖಂಡರುಗಳಾದ ಚಂದ್ರನಾಯಕ್, ಅರುಣಕುಮಾರ್, ಪ್ರದೀಪ್ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!