ಮಲೇಬೆನ್ನೂರು, ಫೆ.10- ಇಲ್ಲಿನ ಹೊರ ವಲಯದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗುತ್ತಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಶಾಸಕ ಹೆಚ್.ಡಿ. ರೇವಣ್ಣ ನಿನ್ನೆ ಭೇಟಿ ನೀಡಿದ್ದರು.
ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಂಡಿರುವ ವೀರಭದ್ರೇಶ್ವರ ದೇವಾಲಯ ಸಮುಚ್ಛಯ ಎಲ್ಲರನ್ನೂ ಕೈ ಬೀಸಿ ಕರೆಯುವಂತಿದೆ. ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಿರುವ ದೇವಾಲಯದ ಕೆತ್ತನೆ ಕೆಲಸಕ್ಕೆ ರೇವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನ, ರಾಜಗೋಪುರ, ಗರ್ಭಗುಡಿ, ಧ್ಯಾನ ಮಂದಿರ, ದಾಸೋಹ ಭವನ ನಿರ್ಮಾಣಕ್ಕೆ ಖರ್ಚಾಗಿರುವ ವೆಚ್ಚದ ಬಗ್ಗೆ ದೇವಸ್ಥಾನ ಟ್ರಸ್ಟ್ ಕಮಿಟಿಯ ಬಿ. ಚಿದಾನಂದಪ್ಪ ಅವರಿಂದ ಮಾಹಿತಿ ಪಡೆದುಕೊಂಡರು.
ದೇವಾಲಯಕ್ಕೆ ಇನ್ನೂ ಸಾಕಷ್ಟು ಅನುದಾನದ ಅವಶ್ಯಕತೆ ಇದ್ದು, ಕೈಲಾದಷ್ಟು ನೆರವು ನೀಡುವುದಾಗಿ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಿ ಸಮ್ಮಿಶ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದ 1 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತೇನೆಂದು ರೇವಣ್ಣ ಭರವಸೆ ನೀಡಿದರು.
ಬಿ. ಚಿದಾನಂದಪ್ಪ ಅವರು, ಮೇ ತಿಂಗಳಲ್ಲಿ ದೇವಾಲಯದ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳುವ ಉದ್ಧೇಶವಿದ್ದು, ತಾವೂ ಆಗಮಿಸುವಂತೆ ರೇವಣ್ಣ ಅವರಿಗೆ ಆಹ್ವಾನ ನೀಡಿದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ದೇವಸ್ಥಾನ ಟ್ರಸ್ಟ್ ಕಮಿಟಿಯ ಬಿ. ಪಂಚಪ್ಪ, ಬಿ. ನಾಗೇಂದ್ರಪ್ಪ, ಬಿ. ಮಹಾರುದ್ರಪ್ಪ, ಬಿ. ಶಂಭುಲಿಂಗಪ್ಪ, ಬಿ. ನಾಗೇಶ್, ಬಿ. ಉಮಾಶಂಕರ್, ಬಿ. ಮಲ್ಲಿಕಾರ್ಜುನ್, ಬಿ.ವಿ. ರುದ್ರೇಶ್, ಆದಾಪುರ ವಿಜಯಕುಮಾರ್, ಹೊಸಳ್ಳಿ ಕರಿಬಸಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.