ಜಗಳೂರಿನಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭ

ಜಗಳೂರು, ಫೆ.10- ರೈತರ ಅನುಕೂಲಕ್ಕಾಗಿ ಸರ್ಕಾರ ರಾಗಿ ಖರೀದಿ ಕೇಂದ್ರ ತೆರೆದಿದ್ದು, ತಾಲ್ಲೂಕಿನ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಪಿಎಂಸಿ ಅಧ್ಯಕ್ಷ ರೇಣುಕಾನಂದ ಹೇಳಿದರು.

ಪಟ್ಟಣದ ಎಪಿಎಂಸಿ ಕಚೇರಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಮೆಕ್ಕೆ ಜೋಳ, ಕಡಲೆ, ಶೇಂಗಾ ಸೇರಿದಂತೆ ಬೆಳೆದ ಹಲವು ಬೆಳೆಗಳಿಗೆ ಮಾರುಕಟ್ಟೆಗಳಲ್ಲಿ ಸೂಕ್ತ ಬೆಂಬಲ ಬೆಲೆ ಸಿಗದೆ ಮಳೆಯಾಶ್ರಿತ ರೈತರು ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದು, ಸರ್ಕಾರ ಖರೀದಿ ಕೇಂದ್ರ ತೆರೆದು ನೆರವಾಗಿದೆ ಎಂದರು.

ರಾಗಿ ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್‌ಗೆ 3295 ರೂ. ಒಂದು ಚೀಲಕ್ಕೆ 22 ರೂ. ಸೇರಿದಂತೆ 3317 ರೂಪಾಯಿಗಳನ್ನು ಪಾವತಿಸಲಾಗುವುದು. ಅಲ್ಲದೆ ರೈತರ ಬೆಳೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯಾಪಾರ, ವಹಿವಾಟು ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಗುರುಮೂರ್ತಿ, ಸದಸ್ಯರಾದ ಹನುಮಂತಪ್ಪ, ಶ್ರೀಶೈಲಾಚಾರಿ, ಗೋವಿಂದಪ್ಪ, ಖರೀದಿ ಕೇಂದ್ರದ ವ್ಯವಸ್ಥಾಪಕ ಶಂಕರ್, ಆಹಾರ ಇಲಾಖೆಯ ಶಿವಪ್ರಕಾಶ್ ಉಪಸ್ಥಿತರಿದ್ದರು.

error: Content is protected !!