ಹರಿಹರ, ಫೆ.8- ಕವಿ ತನ್ನ ಕುಟುಂಬದ ಕುರಿತು ಯೋಚಿಸುವುದಿಲ್ಲ. ಆತ ಸದಾ ಜೀವ ಪರ, ನಿಸರ್ಗ ಪರ, ಸತ್ಯದ ಪರವಿದ್ದು ಸಾಮಾಜಿಕ ಚಿಂತನೆಗಳನ್ನು ಹೊಂದಿರುತ್ತಾನೆ ಎಂದು ಭದ್ರಾವತಿಯ ಸರ್. ಎಂ.ವಿ. ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಡಿ. ಶಿವಲಿಂಗೇಗೌಡ ಹೇಳಿದರು.
ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಸಾಹಿತ್ಯ ಸಂಗಮ ಸಂಸ್ಥೆ ಹಮ್ಮಿಕೊಂಡಿದ್ದ `ಹರಿಹರ ಶ್ರೀ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಹರಿಹರಶ್ರೀ ಪ್ರಶಸ್ತಿ ಪುರಸ್ಕೃತ ಕವನ ಸಂಕಲನ ಕುರಿತು ಅವರು ಮಾತನಾಡಿದರು.
ಪ್ರಶಸ್ತಿಗೆ ಭಾಜನವಾದ ಕವನ ಸಂಕಲನ ಶಾಂತಿ ಬೀಜಗಳ ಜತನ. ತುಂಬಾ ಮಾನವೀಯ ಮೌಲ್ಯಗಳನ್ನು ತುಂಬಿದೆ. ಕವಿ ಮನುಷ್ಯತ್ವದ ಮಹತ್ವನ್ನು ಕವಿತೆಗಳ ಮೂಲಕ ನಮ್ಮ ಕಣ್ಣನ್ನು ತೆರೆಸಲು ಪ್ರಯತ್ನಿಸಿದ್ದಾರೆ. ಒಂದು ಕಾವ್ಯ ಎಷ್ಟು ಜೀವಪರ, ನಿಸರ್ಗಪರ ವಸ್ತುವನ್ನು ಹೊಂದಿರುತ್ತದೆಯೋ ಅದರ ಮೇಲೆ ಅದರ ಮೌಲ್ಯ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಹರಿಹರಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ. ಪ್ರಕಾಶ್ ಗ.ಖಾಡೆ ಸಾಹಿತಿಯಾದವನಿಗೆ ಸಾಮಾಜಿಕ ಕಳಕಳಿಯಿದ್ದರೆ, ಸೃಜನಶೀಲತೆಯಿದ್ದರೆ ಮಾತ್ರ ಮೌಲ್ಯಯುತ ಕವನ ಬರೆಯಲು ಸಾಧ್ಯ ಎಂದರು. ದಾನಿಗಳಾದ ತುಕಾಮಣಿಸಾ ಭೂತೆ ಅವರ ಸಾಹಿತ್ಯ ಪ್ರೇಮವನ್ನು ಕೊಂಡಾಡಿದರು.
ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ಸಾಹಿತಿ ಭಗವಾನ್ ಮೇಲೆ ಮಸಿ ಹಾಕಿದ ಘಟನೆಯನ್ನು ಖಂಡಿಸಿದರು.
ಕಾರ್ಮಿಕ ಮುಖಂಡರಾದ ಹೆಚ್.ಕೆ. ಕೊಟ್ರಪ್ಪ ಮತ್ತು ಕನ್ನಡ ಪರ ಹೋರಾಟಗಾರ ಎಕ್ಕೆಗೊಂದಿ ಹೆಚ್.ಬಿ. ರುದ್ರೇಗೌಡ ಅವರಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತ್ಯ ಸಂಗಮ ಅಧ್ಯಕ್ಷ ವಿ.ಬಿ. ಕೊಟ್ರೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಸಿ.ಎನ್. ಹುಲಿಗೇಶ್, ಸಾಹಿತಿ ಜೆ. ಕಲೀಂ ಬಾಷಾ, ಪ್ರೊ.ಸಿ.ವಿ. ಪಾಟೀಲ್, ಹೆಚ್. ನಿಜಗುಣ ಉಪಸ್ಥಿತರಿದ್ದರು. ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಚಂದ್ರಪ್ಪ, ಸದಾನಂದ ಕುಂಬಳೂರು, ಕೊಟ್ರಪ್ಪ, ಅಜೀಜ್ ರೆಹಮಾನ್, ಹುಲಿಕಟ್ಟೆ ಚನ್ನಬಸಪ್ಪ, ಭೂಮೇಶ್, ಎಂ.ವಿ. ಹೊರಕೇರಿ, ಪಿ.ಎಂ. ಇಂದೂಧರ್ ಸ್ವಾಮಿ, ಡಿ.ಟಿ. ತಿಪ್ಪಣ್ಣರಾಜು, ಪರಶು ರಾಮ ಅಂಬೇಕರ್, ಸುಬ್ರಹ್ಮಣ್ಯ ನಾಡಿಗೇರ್, ನಾಗರ ತ್ನಮ್ಮ, ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಶಾಂತಾ ಹುಲ್ಯಾಳಮಠ ಇನ್ನಿತರರು ಇದ್ದರು.
ಸುಜಾತ ಗೋಪಿನಾಥ್ ಪ್ರಾರ್ಥಿಸಿದರು. ಗಂಗಮ್ಮ ಸುರೇಶಪ್ಪ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ರಿಯಾಜ್ ಅಹ್ಮದ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಬಿ.ಬಿ. ರೇವಣನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ಮಂಜುನಾಥಯ್ಯ ವಂದಿಸಿದರು.