ಕೂಡ್ಲಿಗಿ, ಏ.11 – ಪಟ್ಟಣದ ಅವೈಜ್ಞಾನಿಕ ಯುಜಿಡಿ ಕಾಮಗಾರಿ ನಮ್ಮಗಳ ನೆಮ್ಮದಿ ಹಾಳು ಮಾಡಿದೆ ಎಂದು ನಾಗರಿಕರು ದೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಟ್ಟಣದ ಬಹುತೇಕ ಕಡೆಗಳಿಂದ ದೂರು ಮತ್ತು ಆಕ್ರೋಶ ಕೇಳಿಬಂದಿದ್ದು, ಸಮಸ್ಯೆಗೆ ಸ್ಪಂದಿಸಬೇಕಾಗಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಗಪ್‌ಚುಪ್ ಆಗಿರುವುದು ಅನುಮಾನಗಳನ್ನು ಸೃಷ್ಟಿಸಿದೆ.
10 ಹಾಗೂ 11ನೇ ವಾರ್ಡ್‌ಗೆ ಹೊಂದಿಕೊಂಡಿರುವ ಶ್ರೀ ಊರಮ್ಮ ದೇವಿ ದೇವಸ್ಥಾನದ ಹಿಂಭಾಗದಲ್ಲಿ, ಕಾಲುವೆಗಳು ಸಂಪೂರ್ಣ ಕುಸಿದು ಹೋಗಿವೆ. ಹಲವೆಡೆ ಸಂಪೂರ್ಣ ಮುಚ್ಚಿಹೋಗಿವೆ. ಯುಜಿಡಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಪ.ಪಂ. ನಿರ್ವಹಣೆಯ ಕೊರತೆಯಿಂದಾಗಿ ಕಾಲುವೆಗಳು ಬಂದ್ ಆಗಿವೆ ಎಂದು ನಾಗರಿಕರು ದೂರಿದ್ದಾರೆ.
ಪ.ಪಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆಯಾದರೂ ಪ್ರಯೋಜನವಾಗಿಲ್ಲ ಎಂದು ಕಾರ್ಮಿಕ ಮುಖಂಡ ಯಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮ್ಯುನಿಸ್ಟ್ ಮುಖಂಡ ಕಾಂ. ಹೆಚ್. ವೀರಣ್ಣ ಸ್ಥಳ ಪರಿಶೀಲಿಸಿ, ಪ.ಪಂ. ಅಧಿಕಾರಿಗಳ ಗಮನಕ್ಕೆ ತಂದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಕೆಲ ದಿನಗಳ ಕಾಲಾವಕಾಶ ಕೋರಿದಾಗ, ಒಂದು ವಾರದ ಗಡುವು ನೀಡಿದ್ದು, ಸಮಸ್ಯೆಗೆ ಖಾಯಂ ಪರಿಹಾರ ದೊರಕದಿದ್ದಲ್ಲಿ, ಪ.ಪಂ. ಆವರಣದಲ್ಲಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಯಲ್ಲಪ್ಪ ಮಾತನಾಡಿದರು.