ರಾಜನಹಳ್ಳಿ (ಚಳ್ಳಕೆರೆ ತಿಪ್ಪೇರುದ್ರಸ್ವಾಮಿ ವೇದಿಕೆ), ಫೆ.8- ಇಲ್ಲಿನ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ಬೆಳಿಗ್ಗೆ ದೊಡ್ಡೇರಿಯ ಗುರು ದತ್ತಾವಧೂತ ಆಶ್ರಮದ ಶ್ರೀ ಸತ್ ಉಪಾಸಿ ಮಲ್ಲಪ್ಪ ಸ್ವಾಮೀಜಿ ವಾಲ್ಮೀಕಿ ಧ್ವಜಾ ರೋಹಣ ಮಾಡುವ ಮೂಲಕ 3ನೇ ವರ್ಷದ ಐತಿ ಹಾಸಿಕ ವಾಲ್ಮೀಕಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಪುಣ್ಯಕೋಟಿ ಆಶ್ರಮದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಈ ವೇಳೆ ಹಾಜರಿದ್ದರು.
ನಂತರ ರಾಜನಹಳ್ಳಿಯಿಂದ ಮಠದ ವರೆಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ವೈಭವದೊಂದಿಗೆ ನಡೆಯಿತು. ಪೂರ್ಣಕುಂಭ ಮೇಳ ಹೊತ್ತ ನೂರಾರು ಮಹಿಳೆಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಕಲಾಮೇಳಗಳು ಮೆರವಣಿಗೆಗೆ ಮೆರಗು ತಂದವು.
ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಮಹಾಮಂಟಪದಲ್ಲಿರುವ ಮಾಜಿ ಸಚಿವ ಚಳ್ಳಕೆರೆ ತಿಪ್ಪೇಸ್ವಾಮಿ ವೇದಿಕೆಯಲ್ಲಿ ವಾಲ್ಮೀಕಿ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವವನ್ನು ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ವಾಲ್ಮೀಕಿ ನಾಯಕ ಸಮಾಜವಾಗಿದೆ ಎಂದರು.
ಮಾಜಿ ಸಚಿವ ಶಿವಮಮೂರ್ತಿ ನಾಯ್ಕ್ ಮಾತನಾಡಿ, ಸಂವಿಧಾನದ ಆಶಯದಂತೆ ನೊಂದ ಜನರಿಗೆ ಮೊದಲು ಸೌಲಭ್ಯ ದೊರಕಬೇಕು. ಈ ಸಮಾಜದ ಎಲ್.ಜಿ ಹಾವನೂರು ಅವರು ಹಿಂದುಳಿದ ಜನರ ಮಹಾಚೇತನವಾಗಿದ್ದಾರೆ. ದೇವರಾಜ ಅರಸು ಅವರು ವಾಲ್ಮೀಕಿ ಸಮಾಜವನ್ನು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದರು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ರಮೇಶ್ ಬಾಬು, ಮಾಜಿ ಶಾಸಕ ಬಸವರಾಜ್ ನಾಯ್ಕ, ಜಿ.ಪಂ. ಅಧ್ಯಕ್ಷೆ ಶ್ರೀಮತಿ ಶಾಂತಕುಮಾರಿ ಶಶಿಧರ್ ಮಾತನಾಡಿದರು.
ಶಾಸಕ ಎಸ್. ರಾಮಪ್ಪ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ದಾವಣಗೆರೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಎಸ್.ವಿ. ಹಲಸೆ, ಕಾಂಗ್ರೆಸ್ ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್, ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ರಾಜನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಲಂಕೇಶ್, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಧರ್ಮದರ್ಶಿಗಳಾದ ಶಾಂತ ಸುರಪುರ, ಹರ್ತಿಕೋಟೆ ವೀರೇಂದ್ರ ಸಿಂಹ, ಶಾಂತಲಾ ರಾಜಣ್ಣ, ಮುಖಂಡರಾದ ಸಣ್ಣ ತಮ್ಮಪ್ಪ ಬಾರ್ಕಿ, ತಿಮ್ಮೇನಹಳ್ಳಿ ಚಂದ್ರಪ್ಪ, ಜಿಗಳಿ ಆನಂದಪ್ಪ, ಭಾನುವಳ್ಳಿ ಪುಟ್ಟಪ್ಪ, ವಾಲ್ಮೀಕಿ ವಿಜಯ ಸ್ಮರಣ ಸಂಪುಟದ ಸಂಪಾದಕ ಡಾ. ಎ.ಬಿ. ರಾಮಚಂದ್ರಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ನೇತ್ರ ತಜ್ಞ ಡಾ. ರವೀಂದ್ರನಾಥ್, ಕೀಲು ಮೂಳೆ ತಜ್ಞ ಡಾ. ರಮೇಶ್ ಪೂಜಾರ್, ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆದ ನಿಶಾಂತ್, ಯೋಗಪಟು ಚೈತ್ರ, ಬಸವರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ಅನುಸೂಯ ಕೆಂಪನಹಳ್ಳಿ ಮತ್ತಿತರರನ್ನು ಸನ್ಮಾನಿಸಲಾಯಿತು.
ಜಾತ್ರಾ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. `ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್ ಸ್ವಾಗತಿಸಿದರು. ಎನ್.ಎಂ. ಆಂಜನೇಯ ಗುರೂಜಿ ನಿರೂಪಿಸಿದರೆ, ಹರಪನಹಳ್ಳಿಯ ಕೆ. ಹುಚ್ಚಂಗೆಪ್ಪ ವಂದಿಸಿದರು.