ಮೂರನೇ ದಿನಕ್ಕೆ ಕೆಎಸ್ಸಾರ್ಟಿಸಿ ಚಾಲಕರು-ನಿರ್ವಾಹಕರ ಮುಷ್ಕರ
ದಾವಣಗೆರೆ, ಏ.9- ಕರ್ತವ್ಯಕ್ಕೆ ಹಾಜರಾಗದೇ ಕೆಎಸ್‍ಆರ್‍ಟಿಸಿ ಚಾಲಕರು ಮತ್ತು ನಿರ್ವಾಹಕರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ಬಸ್‌ಗಳು ಸಂಚರಿಸುವ ಕೆಲ ಮಾರ್ಗಗಳಲ್ಲಿ ಖಾಸಗಿ ಬಸ್ ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಆ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ನಿರಾಳರಾಗಿದ್ದಾರೆ.
ದಾವಣಗೆರೆ-ಹರಿಹರ, ಹಾವೇರಿ, ಹುಬ್ಬಳಿ, ರಾಣೇಬೆನ್ನೂರು, ಹೊನ್ನಾಳಿ, ಶಿವಮೊಗ್ಗ, ಹರಪನಹಳ್ಳಿ, ಬಳ್ಳಾರಿ-ಸಂಡೂರು, ಚಿತ್ರದುರ್ಗ, ಬೆಂಗಳೂರು ಮಾರ್ಗಗಳ ಸಂಚಾರಕ್ಕೆ ಖಾಸಗಿ ಬಸ್ ಗಳಿಗೆ ಅನುವು ಮಾಡಲಾಗಿದ್ದು, ಇಂದು ಸಂಜೆವರೆಗಿನ ಮಾಹಿತಿ ಪ್ರಕಾರ ಸುಮಾರು 50 ರಿಂದ 60 ಖಾಸಗಿ ಬಸ್ ಗಳು ಸಂಚರಿಸಿದ್ದು, ಈ ಪೈಕಿ ಬೆಂಗಳೂರಿಗೆ 8 ಬಸ್ ಗಳು, ಶಿವಮೊಗ್ಗಕ್ಕೆ 10ರಿಂದ 15 ಬಸ್‌ಗಳು, ರಾಣೇಬೆನ್ನೂರಿಗೆ ನಾನ್ ಸ್ಟಾಪ್ ಬಸ್ ಗಳು ಸಂಚರಿಸಿವೆ ಎಂದು ತಿಳಿದು ಬಂದಿದೆ.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರುಳ್ಳ ಖಾಸಗಿ ಬಸ್ ಗಳು ಸಾರಿಗೆ ಬಸ್‌ಗಳು ಸಂಚರಿಸುವ ಮಾರ್ಗಗಳಿಗೆ ಹೊರಡುತ್ತಿವೆಯಲ್ಲದೇ, ಕೆಲವು ಬಸ್ ಗಳು ಸಜ್ಜಾಗಿ ನಿಂತಿದ್ದು ಸಾಮಾನ್ಯವಾಗಿತ್ತು.
ಪ್ರಯಾಣಿಕರು ಸಹ ಖಾಸಗಿ ಬಸ್‌ಗಳ ಮೊರೆ ಹೋಗಿದ್ದರು. ಸಾರಿಗೆ ನಿಲ್ದಾಣದಲ್ಲಷ್ಟೇ ಅಲ್ಲದೇ ಪಕ್ಕದ ಖಾಸಗಿ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಕಂಡು ಬಂತು.
ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳ ಸೇವೆ ಅಲ್ಪವಾಗಿರುವ ಕಾರಣ ಪ್ರಯಾಣಿಕರು ಖಾಸಗಿ ಬಸ್‌ಗಳತ್ತ ಮುಖ ಮಾಡಿರುವುದರಿಂದ ಖಾಸಗಿ ಬಸ್‌ಗಳಿಗೆ ಆದಾಯದಲ್ಲಿ ಅನುಕೂಲವಾಗಿದೆ. ಆದರೆ ಸಾರಿಗೆ ಬಸ್‌ಗಳು ಸಂಚರಿಸುವಷ್ಟು ಸೇವೆ ನೀಡಲಾಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಮುಷ್ಕರಕ್ಕಿಳಿದ ಸಾರಿಗೆ ನಿರ್ವಾಹಕರು ಮತ್ತು ಚಾಲಕರಿಗೆ ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಸ್ಪಂದಿಸದೇ ಇರುವುದು ಅವರ ಜೀವನ ಸಂಕಷ್ಟಮಯವಾಗಲಿದೆ ಎಂಬ ಕಾಳಜಿಯೂ ಕೆಲ ಖಾಸಗಿ ಬಸ್‌ಗಳವರಿಂದ ವ್ಯಕ್ತವಾಗಿದೆ.