ಸೂಫಿ ಸಂತರು, ಶರಣರು ಬೇರೆಯಲ್ಲ. ನಮ್ಮ ಜೀವನದ ಭಾವನೆಗಳು ಒಂದಾಗಬೇಕು : ಶ್ರೀ ಸಂಗಮಾನಂದ ಸ್ವಾಮೀಜಿ
ದಾವಣಗೆರೆ, ಏ.8- ಚಿಕ್ಕಮಗಳೂರು ಜಿಲ್ಲೆಯ ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್ಗಿರಿಯಲ್ಲಿರುವ ಹಜರತ್ ದಾದಾ ಹಯಾತ್ ಮೀರ್ ಖಲಂದರ್ ಬಾಬಾರವರ ಉರುಸ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಮೂರು ದಿನಗಳು ನಡೆದ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಪ್ರಥಮ ದಿನ ಸಂದಲ್ ಆಚರಣೆ, ಎರಡನೇ ದಿನ ಉರುಸ್ ಆಚರಣೆ, ಪಿರೇರ್ಗಳಿಂದ ಜರಬ್, ಪಿಯಾಖಾನಿ, ಖವ್ವಾಲಿ ಕಾರ್ಯಕ್ರಮ ನಡೆಯಿತು.
ಸುಪ್ರೀಂ ಕೋರ್ಟ್ ಆದೇಶದನ್ವಯ ಗುಹೆಯೊಳಗೆ (ಗವಿ) ಮುಜಾವರ್ ಹೊರತುಪಡಿಸಿ ಅನ್ಯರಿಗೆ ನಿರ್ಬಂಧ ಹೇರಿದ ಕಾರಣ ಜಿಲ್ಲಾಡಳಿತ ಈ ಕ್ರಮದಿಂದ ಶಾಖಾದ್ರಿಗಳಾದ ಸೈಯದ್ ಗೌಸ್ ಮೊಹಿಯುದ್ದೀನ್ ಅವರು ಅಸಮಾಧಾನ ವ್ಯಕ್ತಪಡಿಸಿ, ಗುಹೆಯ ಗೇಟ್ ಮುಂದೆಯೇ ಫಾತೇಹಾ ಖ್ವಾನಿ ಪಠಿಸಿ, ಕೊಂಚ ಕ್ಷಣ ಪ್ರತಿಭಟಿಸಿದರು.
ಈ ಬಾರಿಯ ಉರುಸ್ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಗಮಿಸಿದ ಶ್ರೀ ಸಂಗಮಾನಂದ ಸ್ವಾಮೀಜಿ ಮಾತನಾಡಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ಗಿರಿ ಭಾವೈಕ್ಯತೆ ಪೀಠದ ಸೂಫಿ ಸಂತರು ಎಂದರೆ ಭಾವೈಕ್ಯತೆೆಯ ಸಂದೇಶ ಸಾರುವವರು. ಈ ಸ್ಥಳವೂ ಸಹ ಸೌಹಾರ್ದ ಪೀಠ. ಸೂಫಿಗಳು, ಮಹಾತ್ಮರು, ಸಂತರು, ಶರಣರು ಬೇರೆಯಲ್ಲ. ಹಾಗಾಗಿ ನಮ್ಮ ಜೀವನ, ಭಾವನೆಗಳು ಒಂದಾಗಿ ದೇಶದ ಎಲ್ಲ ಶಕ್ತಿ ಸೇರಿದರೆ ಯಾವ ತೊಂದರೆಗಳೂ ಆಗುವುದಿಲ್ಲ. ಪ್ರಥಮ ಬಾರಿಗೆ ಈ ಶುಭ ಕಾರ್ಯದಲ್ಲಿ ಭಾಗವಹಿಸಿದ್ದೇವೆ. ಇದು ನನ್ನ ಪುಣ್ಯ. ದತ್ತಾತ್ರೇಯ ಪಾದ ಇಟ್ಟಿರುವ ಮತ್ತು ಬಾಬಾ ಬುಡನ್ ಸಾಹೇಬರು ತಪಸ್ಸು ಮಾಡಿರುವ ಜಾಗದಲ್ಲಿ ಕಾಲಿಡುತ್ತಿರುವುದು ಅಗೋಚರವಾದ ಪುಣ್ಯ ಎಂದು ಹೇಳಿ, ಪ್ರಸ್ತುತ ದಿನಗಳಲ್ಲಿ ಮಾಧ್ಯಮದವರ ಪಾತ್ರ ಬಹಳ ಅವಶ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಭದ್ರ ಬುನಾದಿಯಾಗಬೇಕೆಂದು ಕರೆ ನೀಡಿದರು.
ಆಂಧ್ರಪ್ರದೇಶ, ತಮಿಳುನಾಡು, ಗಂಗಾವತಿ, ಬಿಜಾಪುರ, ಗುಲ್ಬರ್ಗಾ, ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಬ್ಯಾರಿಕೇಡ್ ಮುಖಾಂತರ ಸಾಗಿ ಗುಹಾಂತರದಲ್ಲಿ ಪ್ರವೇಶ ಪಡೆದು ದರ್ಶನ ಪಡೆದರು.
ಜಿಲ್ಲಾಡಳಿತದ ಕ್ರಮಕ್ಕೆ ಶಾಖಾದ್ರಿ ಆಕ್ಷೇಪ : ಗುಹೆ ಒಳಗೆ ಇರುವ ಘೋರಿಗಳ ಮೇಲೆ ಹಸಿರು ಬಟ್ಟೆ ಧರಿಸಿ ಗಂಧ ಲೇಪಿಸಲು ಅವಕಾಶ ಕೇಳಿದಾಗ ನ್ಯಾಯಾಲಯದ ಆದೇಶದನ್ವಯ ಅದಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತದ ಈ ಕ್ರಮ ವಿವಿಧ ರಾಜ್ಯಗಳಿಂದ ಬಂದಿರುವ ಸಾವಿರಾರು ಭಕ್ತಾದಿಗಳಿಗೆ ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಖಾದ್ರಿಗಳಾದ ಸೈಯದ್ ಗೌಸ್ ಮೊಹೀಯುದ್ದೀನ್ ಅವರು 1975 ರಿಂದ 2005 ರವರೆಗೂ ಗುಹೆ ಒಳಗೆ ಎಲ್ಲ ವಿಧಿ, ವಿಧಾನಕ್ಕೂ ಅವಕಾಶವಿತ್ತು. ಈಗ ಜಿಲ್ಲಾಡಳಿತ, ನ್ಯಾಯಾಲಯದ ಆದೇಶದಂತೆ ಯಥಾಸ್ಥಿತಿ ಕಾಪಾಡಿ ಎನ್ನುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ, 2007 ರಿಂದ ಪ್ರತಿಭಟಿಸಲಾಗುತ್ತಿದೆ ಎಂದು ವಿವರಿಸಿದರು.
ಜನ್ನತ್ ನಗರದಲ್ಲಿರುವ ಹಜರತ್ ಸೈಯದ್ ಮಲ್ಲಿಕ್ ಜಿನ್ಹಾರ್ ಷಹೀದ್, ಹಜರತ್ ಸೈಯದ್ ಮಲ್ಲಿಕ್ ಸೊನ್ಹಾರ್ಷಹೀದ್ (ರ.ಅ) ರವರ ಘೋರಿಗಳಿಗೆ ಹಸಿರು ಹೊದಿಕೆ (ಗಲೀಫಿ) ಗಂಧ ಲೇಪಿಸಿ ಸಂದಲ್ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಜಿಲ್ಲಾ ರಕ್ಷಣಾಧಿಕಾರಿ ಎಂ.ಹೆಚ್. ಅಕ್ಷಯ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿ. ಸಿಕಂದರ್