ಬಿ. ಸಿದ್ದಪ್ಪ ಕಕ್ಕರಮೇಲಿ
ದಾವಣಗೆರೆ, ಏ.7- ಕಾವ್ಯ ಕನ್ನಿಕೆ ಮೂಡಬೇಕೆಂದರೆ, ಕವಿ ಹೃದಯ-ಮನಸ್ಸು ಶುದ್ಧಗೊಂಡಿರಬೇಕು. ಆಗ ಗಟ್ಟಿ ಕಾವ್ಯ ಮೂಡುತ್ತವೆ. ಸಹೃದಯ ಓದುಗರನ್ನು ತನ್ನತ್ತ ಸೆಳೆಯುತ್ತದೆ ಎಂದು ದಾವಣಗೆರೆ ವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಿದ್ದಪ್ಪ ಬಿ. ಕಕ್ಕರಮೇಲಿ ಹೇಳಿದರು.
ಸುಕೃತಿ ಪ್ರಕಾಶನ ಹಾಗೂ ಡಿ.ಜಿ. ಪುಟ್ಟರಾಜು ಗೆಳೆಯರ ಬಳಗದ ವತಿಯಿಂದ ರೋಟರಿ ಬಾಲ ಭವನದಲ್ಲಿ ಆಯೋಜಿಸಿದ್ದ §ಬೆಳದಿಂಗಳ ಬೆಳಕಿನಲಿ¬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕವಿ ವಿವೇಕಾನಂದ ಸ್ವಾಮಿ ಅವರು ಎಲ್ಲ ವಿಭಾಗಗಳ ಮೇಲೆ ಕಣ್ಣಾಡಿಸಿ, ವಸ್ತು ನಿಷ್ಠತೆಯಿಂದ ಕವನ ರಚಿಸಿದ್ದಾರೆ. ಹೈಸ್ಕೂಲು ಮಟ್ಟದಿಂದ ಆರಂಭಗೊಂಡು ಇಲ್ಲಿಯವರೆಗೆ ಸಾಗಿ ಬಂದ ಕವನಗಳನ್ನು ಬೆಳಕಿಗೆ ತಂದು ಆದರ್ಶ ಪ್ರಿಯರಾಗಿದ್ದಾರೆ ಎಂದರು.
ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಡಾ|| ಲಿಂಗರಾಜ ರಾಮಪುರ್ ಧಾರವಾಡ ಇವರು ತಣ್ಣಗೆ ಬರೆವ, ಪುಸ್ತಕ ರೂಪಕ್ಕೆ ತರುವ ಕಾರ್ಯ ಸುಲಭವಲ್ಲ. ಗೆಳೆಯರ ಪ್ರೋತ್ಸಾಹ ಇನ್ನಷ್ಟು ದೊರೆತು ಅವರ ಬೇರೆ ಕಾವ್ಯ ಪ್ರಕಾಶನಗೊಳ್ಳಲಿ ಎಂದರು.
ಗುರು, ಹಿರಿಯರಾದ ಕಲಿವೀರ ಕಳ್ಳಿಮನಿ, ಹರಿಹರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಚಂದ್ರಪ್ಪ, ಜೆ.ಹೆಚ್.ಪಟೇಲ್ ಕಾಲೇಜು ಪ್ರಾಚಾರ್ಯೆ ಪ್ರತಿಭಾ ಪಿ.ದೊಗ್ಗಳ್ಳಿ, ಪ್ರಕಾಶಕರಾದ ಕೆ.ಎಂ.ವನಜಾಕ್ಷಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು. ಕವಿ ವಿವೇಕಾನಂದ ಸ್ವಾಮಿ ಮಾತನಾಡಿ, ನನ್ನ ಕಾವ್ಯ ಕನ್ನಿಕೆ ಮಾರಾಟದ ವಸ್ತುವಲ್ಲ. ಓದುಗರಿಗೆ ಉಚಿತವಾಗಿ ನೀಡುವೆ ಎಂದು ಎಲ್ಲರಿಗೂ ಹಂಚಿದರು.
ಓಂಕಾರಯ್ಯ ತವನಿಧಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಯುತರು ಮೊದಲ ಸಂಕಲನದಲ್ಲೇ ಗಟ್ಟಿ ಕಾವ್ಯ ರಚಿಸಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ರೂವಾರಿ ಎಂ. ಗುರುಸಿದ್ಧಸ್ವಾಮಿ ಗೆಳೆಯ ಪುಟ್ಟರಾಜು ಇದ್ದಿದ್ದರೆ ಇನ್ನಷ್ಟು ಅರ್ಥಪೂರ್ಣವಿರುತ್ತಿತ್ತು ಎಂದು ಹೇಳುವ ಮೂಲಕ ಸ್ಮರಿಸಿದರು.
ಸಿದ್ಧೇಶ್ ಪ್ರಾರ್ಥಿಸಿದರು. ಕೆಂಚಪ್ಪ ಸ್ವಾಗತಿಸಿದರು. ದಾದಾಪೀರ್ ನವಿಲೇಹಾಳ್ ವಂದಿಸಿದರು.