ಹರಿಹರ, ಫೆ.5- ಜಿಲ್ಲಾ ಪೊಲೀಸ್ ಗ್ರಾಮಾಂತರ ಉಪವಿಭಾಗ, ಹರಿಹರ ನಗರ ಠಾಣೆ ಮತ್ತು ವೃತ್ತ ನಿರೀಕ್ಷಕ ಠಾಣೆ ಹಾಗೂ ಗುತ್ತೂರು ಗ್ರಾಮಾಂತರ ಠಾಣೆ ಇವರ ಸಂಯುಕ್ತಾಶ್ರಯದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಚಾಲನೆ ಮಾಡಬೇಕೆಂದು ಬೈಕ್ ರಾಲಿ ಮುಖಾಂತರ ಜಾಗೃತಿ ಕಾರ್ಯಕ್ರಮವನ್ನು ಇಂದು ನಗರದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಮಾತನಾಡಿ, ಅಪಘಾತ ನಡೆದ ಬಳಿಕ ಜಾಗೃತಿ ವಹಿಸುವುದರ ಬದಲು ಅಪಘಾತ ನಡೆಯದಂತೆ ಜಾಗೃತಿ ವಹಿಸಿದರೆ ಅಪಘಾತಗಳನ್ನು ತಡೆಗಟ್ಟಲು ಸಾಧ್ಯ. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಚಾಲನೆ ಮಾಡಬೇಕು. ನಿಮ್ಮ ಬೈಕ್ ವಾಹನಗಳ ಇನ್ಸೂರೆನ್ಸ್ ಚಾಲನಾ ಪರವಾನಗಿ ಇನ್ನಿತರೆ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಅಧಿ ಕೃತವಾಗಿ ಕ್ರೋಢೀಕರಿಸಿ ತಮ್ಮ ಬಳಿ ಇಟ್ಟುಕೊಳ್ಳ ಬೇಕು. ಅಪಘಾತಗಳು ಸಂಭವಿಸಿದರೆ ಸಾವು-ನೋವುಗಳು ಸಂಭವಿಸಿದಾಗ ಪರಿಹಾರವನ್ನು ತೆಗೆದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರು ಅಪಘಾತ ಆಗುವ ಮುನ್ನವೇ ಎಚ್ಚರಗೊಂಡು ಹೆಲ್ಮೆಟ್ ಧರಿಸಿಕೊಂಡು ಚಾಲನೆ ಮಾಡಿ, ತಮ್ಮ ವಾಹನಗಳ ಪರವಾನಗಿ, ದಾಖಲಾತಿಗಳನ್ನು ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಗತ್ತಿನಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ದೇಶ ಭಾರತವಾಗಿದೆ. ಚಾಲಕರು ಹಾಗೂ ಜನಸಾಮಾನ್ಯರು ರಸ್ತೆ ನಿಯಮಗಳ ಪಾಲನೆ ಬಗ್ಗೆ ಗಮನ ನೀಡದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಾ ಸಾಗುತ್ತದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಬೇಕು ಎಂಬ ಕಾನೂನು ಜಾರಿ ಇರುವ ಹಿನ್ನೆಲೆಯಲ್ಲಿ ಕಾನೂನಿಗೆ ಹೆದರಿ ಹೆಲ್ಮೆಟ್ ಹಾಕುವ ಬದಲು ನಿಮ್ಮ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಹಾಕಿಕೊಳ್ಳಬೇಕೆಂಬ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದಾವಣಗೆರೆ ಡಿವೈಎಸ್ಪಿ ನರಸಿಂಹರಾಜು ತಾಮ್ರಧ್ವಜ, ಗ್ರಾಮಾಂತರ ಠಾಣೆಯ ಪಿಎಸ್ಐ ಡಿ. ರವಿಕುಮಾರ್, ಮಲೇ ಬೆನ್ನೂರು ಪಿಎಸ್ಐ ವೀರಬಸಪ್ಪ ಕಳಸಾಪುರ, ನಗರ ಠಾಣೆ ಪಿಎಸ್ಐ ಸುನಿಲ್ ಬಸವರಾಜ ತೇಲಿ ಮತ್ತಿತರರು ಬೈಕ್ ರಾಲಿಯಲ್ಲಿ ಭಾಗವಹಿಸಿದ್ದರು.