ಚಿತ್ರದುರ್ಗ, ಫೆ.4- ಕವನಗಳನ್ನು ರಚಿಸು ವಾಗ ಅನುಭವ, ಅನುಭಾವ ಎರಡೂ ಅಂಶಗಳು ಮಠಗಳಿಗೆ ಮಾತ್ರ ಸೀಮಿತವಾಗುತ್ತಿವೆ. ಆದರೆ ಕವಿಗಳಲ್ಲಿ ಅದು ಒಡಮೂಡಬೇಕು ಎಂದು ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಅಧ್ಯಕ್ಷ ಡಾ. ರೇವಣ್ಣ ಬಳ್ಳಾರಿ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ದಿನಾಚರಣೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸಂಘಟನೆಯ ಅಂಶಗಳು, ಪ್ರಸ್ತುತ ಘಟನೆಗಳು ಕವನಗಳಾಗಿ ಹರಿದು ಬರಬೇಕು. ಡಿವಿಜಿ, ಕುವೆಂಪು, ಸಿಪಿಕೆ ಅಂತವರ ಕವನಗಳನ್ನು ಯುವ ಸಮೂಹ ಅಧ್ಯಯನ ಮಾಡಬೇಕು. ಮಹಾರಾಜರು, ಅರಸರು, ಚಕ್ರವರ್ತಿಗಳು ಹಿಂದೆ ತಮ್ಮ ಆಸ್ಥಾನದಲ್ಲಿ ಕವಿಗಳನ್ನು ಪೋಷಿಸುತ್ತಿದ್ದರು. ಅಂತಹ ಸೂಕ್ಷ್ಮ ಮನಸಿನ ಕವಿಗಳನ್ನು ಸಾಹಿತಿಗಳು ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಕನ್ನಡ ಕಾವ್ಯ ಪ್ರಾಚೀನ ಕಾಲದಿಂದಲೂ ವೈವಿಧ್ಯಮಯವಾಗಿ ಬೆಳೆದು ಬಂದಿದೆ. ಕಾವ್ಯ ಮೀಮಾಂಸೆಯ ಮೌಲ್ಯತೆ ಮತ್ತು ಘನತೆಯನ್ನು ಬರಹಗಾರರು ಕಾಪಾಡಿಕೊಂಡು, ಸಾಹಿತ್ಯ ರಚನೆ ಮಾಡಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಮಾಲತೇಶ್ ಅರಸ್, ಚಿನ್ಮೂ ಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ದಯಾ ಪುತ್ತೂರ್ ಕರ್, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷರಾದ ನಾಗರಾಜ್ ಸಂಗಮ್, ಹೊಸದುರ್ಗ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಧನಂಜಯ ಮೆಂಗಸಂದ್ರ, ವಿಶೇಷ ಚೇತನರ ವೀಣಾಪಾಣಿ, ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಕೆ.ಹೆಚ್. ಜಯಪ್ರಕಾಶ್, ಸಾಹಿತಿ ಪರಶುರಾಮ್ ಗೊರಪ್ಪರ್, ಹಾಸ್ಯ ಸಾಹಿತಿ ಪಿ. ಜಗನ್ನಾಥ್, ಡಿ. ಕಲ್ಲೇಶ್ ಮೌರ್ಯ ಮಾತನಾಡಿದರು.
ಮಂಜುನಾಥ್ ಅಂಗವಿಕಲ ಸೇವಾ ಸಂಘದ ಅಧ್ಯಕ್ಷ ಮಾರುತಿ ತಮಟಕಲ್ಲು ಮತ್ತಿತರರು ಉಪಸ್ಥಿತರಿದ್ದರು. ಯುವ ಸಾಹಿತಿ ಶಿವು ಆಲೂರು, ಕೊರೊನಾ ವಾರಿಯರ್ ನಂಜುಂಡೇಶ್, ಮಹೇಶ್ ಸೂರಮ್ಮನಹಳ್ಳಿ ಅವರನ್ನು ಸನ್ಮಾನಿಸಲಾಯಿತು.