ದಾವಣಗೆರೆ, ಫೆ.4- ಅತ್ತಿಗೆರೆಯ ತರಳ ಬಾಳು ವಿದ್ಯಾಸಂಸ್ಥೆಯ ಶ್ರೀ ಪಟೇಲ್ ನಂದ್ಯಪ್ಪ ಹೊರಟ್ಟಿ ಗೌಡ್ರ ಕಲ್ಲಪ್ಪ ಪ್ರೌಢಶಾಲೆಯ 1985-86 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ನಗರದ ಕೆಇಬಿ ಅತಿಥಿ ಗೃಹ ಸಭಾಂಗಣದಲ್ಲಿ ಮೊನ್ನೆ ಏರ್ಪಡಿಸಿದ್ದ ಸಮಾರಂಭದಲ್ಲಿ ತಮ್ಮ ಗುರುಗಳೂ ಆಗಿರುವ ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅವರಿಗೆ ಗುರು ವಂದನೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಮದೇವಪ್ಪ ಅವರು, ಹರ ಮುನಿದರೂ ಗುರು ಕಾಯುವನು ಎಂಬುದನ್ನು ಸ್ಮರಿಸುತ್ತಾ, ಅಂತಹ ಗುರುವಿನ ಸ್ಥಾನವನ್ನು ಕಳೆದ 35 ವರ್ಷಗಳ ಕಾಲ ತರಳಬಾಳು ವಿದ್ಯಾಸಂಸ್ಥೆಯಲ್ಲಿ ನಿರ್ವಹಿಸಿದ್ದು, ನನ್ನ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು. ನನ್ನ ಶಿಷ್ಯಂದಿರನೇಕರು ಉನ್ನತ ಸ್ಥಾನಗಳಲ್ಲಿದ್ದು, ಗುರುವನ್ನು ಮೀರಿದ ಶಿಷ್ಯರಾಗಿರುವುದು ಸಂತಸ ತಂದಿದೆ ಎಂದು ಮನದುಂಬಿ ಹರಸಿದರು.
ಶಿಕ್ಷಕನಾಗಿ ಹಾಗೂ ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಹಲವು ಸನ್ಮಾನಗಳು, ಗೌರವಗಳು ಲಭಿಸಿವೆ.
ಅವೆಲ್ಲಕ್ಕೂ ಮಿಗಿಲಾದದ್ದು ನೀವು ಸಲ್ಲಿಸುತ್ತಿರುವ ಈ ಗೌರವ ಹಾಗೂ ನಿಮ್ಮ ಹೃದಯ ಶ್ರೀಮಂತಿಕೆ. ಇದು ನನ್ನ ಜೀವನದಲ್ಲಿ ಮರೆಯಲಾರದ ಕ್ಷಣಗಳು ಎಂದು ತಮ್ಮ ಅನುಭವ ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾ ಟಕ ಜಾನಪದ ಅಕಾಡೆಮಿ ಸದಸ್ಯರಾದ ಶ್ರೀಮತಿ ರುದ್ರಾಕ್ಷಿ ಸಿ.ಕೆ. ಪುಟ್ಟನಾಯ್ಕ ಮಾತನಾಡಿ, ತಮ್ಮ ಇಂದಿನ ಈ ಸಾಧನೆಗೆ ವಾಮದೇವಪ್ಪನವರೇ ಕಾರಣ ಎಂದು ಗುರು ವಂದನೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಮಂಜುನಾಥ್ ಬಾಬು ವಹಿಸಿದ್ದರು. ಶಾಂತಕುಮಾರಿ, ಎಚ್.ಕೆ. ಶಿವಕುಮಾರ್, ಎಇಇ ಜಿ.ಎಂ. ನಾಯಕ್, ಸಾವಿತ್ರಮ್ಮ, ಪರಮೇಶ್,
ಸಿ.ಕೆ. ನಾಗರಾಜ್, ರುದ್ರೇಶ್, ನಾಗರಾಜ್ ಸೇರಿದಂತೆ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ನಡೆಸಿಕೊಟ್ಟರು.
ಹಿರಿಯ ವಿದ್ಯಾರ್ಥಿನಿ ಸಾವಿತ್ರಮ್ಮ ಪ್ರಾರ್ಥಿಸಿದರು. ಎ. ಎಸ್. ಮಂಜಪ್ಪ ನಿರೂಪಿಸಿದರು.