ಜಗಳೂರು ಕೆನರಾ ಬ್ಯಾಂಕ್‌ನಲ್ಲಿ ನೂಕುನುಗ್ಗಲು : ಕೋವಿಡ್ ನಿಯಮ ಉಲ್ಲಂಘನೆ
ಜಗಳೂರು, ಜೂ.30- ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಕಳೆದ ಎರಡು ದಿನಗಳಿಂದ ಗ್ರಾಹಕರ ನೂಕುನುಗ್ಗಲು ಉಂಟಾಗಿದ್ದು, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ವರದಿಯಾಗಿದೆ.
ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ವಿಲೀನದಿಂದಾಗಿ ಒಂದು ಶಾಖೆ ಮುಚ್ಚಲ್ಪಟ್ಟಿದ್ದು, ಒಂದೇ ಶಾಖೆಯಲ್ಲಿ ಬ್ಯಾಂಕ್ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್ ಅಧಿಕಾರಿಗಳು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೆ ಬ್ಯಾಂಕ್ ವಿಲೀನ ಪ್ರಕ್ರಿಯೆ ಮಾಡಿರುವುದು ಸಹಜವಾಗಿಯೇ ಗ್ರಾಹಕರು ದುಪ್ಪಟ್ಟಾಗಿ, ನೂಕುನುಗ್ಗಲು ಉಂಟಾಗಿದೆ.
ಸಿಂಡಿಕೇಟ್ ಬ್ಯಾಂಕಿನ ಕಟ್ಟಡಕ್ಕೆ ಕೆನರಾ ಬ್ಯಾಂಕ್ ಶಾಖೆಯನ್ನು ಸ್ಥಳಾಂತರಗೊಳಿಸಿದೆ. ಆದರೆ ಈ ಕಟ್ಟಡದಲ್ಲಿ ಸಿಬ್ಬಂದಿಗೂ ಸಹ ಕುಳಿತುಕೊಳ್ಳಲು ಸ್ಥಳಾವಕಾಶದ ಕೊರತೆ ಇದೆ. ಇನ್ನು ಗ್ರಾಹಕರು ದುಪ್ಪಟ್ಟಾಗಿ ಕಳೆದೆರಡು ದಿನಗಳಿಂದ ನೂಕುನುಗ್ಗಲು ಉಂಟಾಗುತ್ತಿದೆ. ಬ್ಯಾಂಕಿನ ಒಳಗೆ ಒಂದೇ ಸಾರಿ ನೂರಾರು ಗ್ರಾಹಕರು ನುಗ್ಗುತ್ತಿದ್ದು, ಯಾವುದೇ ಸಾಮಾಜಿಕ ಅಂತರವಿಲ್ಲದೆ ಕೋವಿಡ್ ನಿಯಮಗಳನ್ನು ಪಾಲಿಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಎರಡು ಬ್ಯಾಂಕುಗಳ ವಿಲೀನವಾದರೂ ಸಹ ನಗದು ಸ್ವೀಕಾರ ಮತ್ತು ನಗದು ವಿತರಣೆಗೆ ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಿಲ್ಲ. ಗ್ರಾಹಕರು ನಗದು ಪಾವತಿಸಲು ಮತ್ತು ಸ್ವೀಕರಿಸಲು ಒಂದೇ ಕೌಂಟರ್‌ನಲ್ಲಿ ಸಾಲುಗಟ್ಟಿ ನಿಲ್ಲಬೇಕಾಗಿದೆ. ಸರ್ಕಾರಿ ಚಲನ್, (ನೋಂದಣಿ ಶುಲ್ಕ, ಕಂದಾಯ) ಪಾವತಿಗಳಿಗಾಗಿ ಕೌಂಟರ್ ಇಲ್ಲ. ಲಕ್ಷಕ್ಕೂ ಹೆಚ್ಚಿನ ಮೊತ್ತದ ಪಾವತಿ ಮತ್ತು ಸ್ವೀಕೃತಿಗೆ ಪ್ರತ್ಯೇಕ ಕೌಂಟರ್ ಸಹ ತೆರೆದಿರುವುದಿಲ್ಲ.
ಒಟ್ಟಾರೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಸಿದ್ಧತೆಗಳನ್ನು ಮಾಡಿಕೊಳ್ಳದೇ ಬ್ಯಾಂಕನ್ನು ಒಗ್ಗೂಡಿಸಿ ನಮಗೆ ತೊಂದರೆಯಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಮುಖ್ಯವಾಗಿ ಕೊರೋನಾ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿ ಸಾಮಾಜಿಕ ಅಂತರವಿಲ್ಲದೆ ಗುಂಪು ಗುಂಪಾಗಿ ನಿಂತು ವ್ಯವಹಾರ ಮಾಡುತ್ತಿರುವುದು ಸಹಜವಾಗಿಯೇ ಕೊರೊನಾ ಆತಂಕವನ್ನು ತಂದೊಡ್ಡಿದೆ ಎನ್ನುತ್ತಾರೆ ಕೆಲವು ಗ್ರಾಹಕರು.
ಎಟಿಎಂಗಳ ಮುಂದೆಯೂ ಉದ್ದನೆ ಸಾಲು: ಪಟ್ಟಣದಲ್ಲಿರುವ ಬಹುತೇಕ ಎಟಿಎಂಗಳ ಮುಂದೆ ಜನರ ಸಾಲು ಹೆಚ್ಚಾಗಿ ಕಂಡುಬರುತ್ತಿದೆ. ಇಲ್ಲಿಯೂ ಯಾವುದೇ ಸಾಮಾಜಿಕ ಅಂತರವಿಲ್ಲ.
ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳು ತಕ್ಷಣವೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಗ್ರಾಹಕರಿಗೆ ಕೋವಿಡ್ ನಿಯಮಾನುಸಾರ ಸೇವೆ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಈ ಅವ್ಯವಸ್ಥೆಯ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಮನ ಹರಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.