ಹರಪನಹಳ್ಳಿ, ಜೂ.30- ತಾಲ್ಲೂಕಿನ ಕಾನಹಳ್ಳಿ ಗ್ರಾಮದಲ್ಲಿ ಮಕ್ಕಳ ಶಾಲಾ ದಾಖಲಾತಿಗಾಗಿ ವಿನೂತನ ಪ್ರಯೋಗ ನಡೆಯಿತು.
ಶಿಕ್ಷಕರು ಮನೆ ಮನೆಗೆ ತೆರಳಿ ಅರಿಷಿಣ, ಕುಂಕುಮ ಹಚ್ಚಿ, ದಾಖಲಾಗುವ ಮಗುವಿಗೆ ನೋಟ್ ಪುಸ್ತಕ, ಪೆನ್ಸಿಲ್ ಹಾಗೂ ಗುಲಾಬಿ ಹೂವು ನೀಡಿ ಆರತಿ ಬೆಳಗಿ ಸರ್ಕಾರಿ ಶಾಲೆಗೆ ದಾಖಲಾಗಿ, ವಿದ್ಯಾವಂತರಾಗಿ ಎಂದು ಆಹ್ವಾನ ನೀಡಿದರು.
ಈ ವಿನೂತನ ಪ್ರಯೋಗಕ್ಕೆ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ನಾಗರಾಜ ಚಾಲನೆ ನೀಡಿ ಮಾತನಾಡಿ, ಯಾವ ಯಾವ ಮಕ್ಕಳಲ್ಲಿ ಎಂತೆಂತಹ ಪ್ರತಿಭೆ ಇರುತ್ತದೆಯೋ ಗೊತ್ತಿಲ್ಲ, ಮಕ್ಕಳ ಪ್ರತಿಭೆಯನ್ನು ಹೊರ ತೆಗೆಯಬೇಕು. ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ, ವಿದ್ಯಾವಂತರನ್ನಾಗಿಸಿ ಎಂದು ಕರೆ ನೀಡಿದರು.
ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ, ಶಾಲೆಗೆ ಕಳುಹಿಸಿ ಕೊಡಿ, ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ. ಇಲ್ಲಿ ಸಹ ಉತ್ತಮ ಶಿಕ್ಷಕರಿದ್ದಾರೆ ಎಂದು ಹೇಳಿದರು.
ಮಾಡ್ಲಗೇರಿ ಗ್ರಾ.ಪಂ. ಅಧ್ಯಕ್ಷೆ ಎನ್. ನಿರ್ಮಲ, ಎಸ್ಡಿಎಂಸಿ ಅಧ್ಯಕ್ಷ ಪರಸಪ್ಪ, ಉಪಾಧ್ಯಕ್ಷೆ ಹಾಲಮ್ಮ, ಯುವ ಮುಖಂಡ ರಾಮಕೃಷ್ಣ, ಬಡ್ತಿ ಮುಖ್ಯ ಶಿಕ್ಷಕಿ ಲಕ್ಷ್ಮಿ ರಂಗಣ್ಣನವರ, ಶಿಕ್ಷಕರಾದ ಬಿ. ಮಹಾಲಕ್ಷ್ಮಿ, ಎಸ್.ಎಸ್. ಗೌರಮ್ಮ, ಜಯಪ್ರಕಾಶ್ ಇನ್ನಿತರರಿದ್ದರು.