ಬಿ.ಎಸ್.ಸಿ ಕಾಲೇಜಿನ ಅಧ್ಯಕ್ಷ ಬಿ.ಸಿ.ಶಿವಕುಮಾರ್
ದಾವಣಗೆರೆ, ಏ.6- ಜೀವನದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ ಮುಖ್ಯ. ವಿಜ್ಞಾನಕ್ಕಿಂತ ಕಲೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತ್ವರಿತ ಗತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಬಿ.ಎಸ್.ಸಿ. ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್ ಅಭಿಪ್ರಾಯಪಟ್ಟರು.
ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರಮುಖ ಘಟ್ಟ ಎಂದರು. ಬಹುತೇಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ವಿಜ್ಞಾನದತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ, ವಿಜ್ಞಾನಕ್ಕಿಂತ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಆದ್ದರಿಂದ ವಿಜ್ಞಾನ ವಿಷಯಕ್ಕೆ ಹಾಕುವ ಶ್ರಮವನ್ನು ಕಲೆ ಮತ್ತು ವಾಣಿಜ್ಯ ವಿಷಯದತ್ತ ಹರಿಸಿದರೆ ಉತ್ತಮ ಸಾಧನೆ ಮಾಡಬಹುದು ಎಂದರು. ಓದಿಗೆ ಸಂಬಂಧಿಸಿದಂತೆ ಪೋಷಕರೇ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ವಿದ್ಯಾರ್ಥಿಗಳೇ ಓದಿನ ಆಯ್ಕೆ ಮಾಡಿಕೊಂಡರೆ ಯಶಸ್ಸು ಸುಲಭವಾಗಲಿದೆ ಎಂದರು. ಜೀವನದಲ್ಲಿ ಯಶಸ್ಸು ಕಾಣಲು ಸಂವಹನ ಕೌಶಲ್ಯ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಚಾರ್ಯ ಡಾ. ಕೆ. ಷಣ್ಮುಖ, ಸಹಾಯಕ ಪ್ರಾಧ್ಯಾ ಪಕ ಕೆ.ಜೆ. ಗುರುಪ್ರಸಾದ್, ಸಿದ್ದಗಂಗಾ ಪಿಯು ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಮಾತನಾಡಿದರು.
ಕೆ.ಬಿ. ಚಿನ್ಮಯಿ ಪ್ರಾರ್ಥಿಸಿದರು. ಡಾ.ಕೆ.ಎಂ. ಮಂಜುನಾಥ್ ಸ್ವಾಗತಿಸಿದರು. ಡಾ. ಡಿ.ಹೆಚ್. ಭಾಗ್ಯಶ್ರೀ ನಿರೂಪಿಸಿದರು. ಎಂ.ಹೆಚ್. ಪ್ರಸನ್ನ ರೆಡ್ಡಿ ವಂದಿಸಿದರು.