ದಾವಣಗೆರೆ, ಫೆ.2- ಲಾಕ್ ಡೌನ್‌ನಿಂದ ನಷ್ಟದಲ್ಲಿರುವ ಮದ್ಯದ ಉದ್ಯಮ, ಮದ್ಯ ಮಾರಾಟಗಾರರಿಗೆ ಆದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು. ಹೆಚ್ಚಳ ಮಾಡಿರುವ ಹೆಚ್ಚುವರಿ ಅಬಕಾರಿ ಶುಲ್ಕ ಕೈಬಿಡಬೇಕೆಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಇಂದು ಮದ್ಯ ಮಾರಾಟಗಾರರು ಧರಣಿ ಸತ್ಯಾಗ್ರಹ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಮದ್ಯ ಮಾರಾಟಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ, ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿದರು.
ಮದ್ಯ ಮಾರಾಟಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಸಿಎಂಗೆ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದಿಂದ ಸಾಕಷ್ಟು ಸಲ ಮನವಿ ಅರ್ಪಿಸಿದ್ದರೂ ಸ್ಪಂದಿಸಿಲ್ಲ. ನಮ್ಮ ಸಮಸ್ಯೆ ಕುರಿತಂತೆ ಸಭೆ ಕರೆದು, ಚರ್ಚಿಸುವ ವ್ಯವಧಾನವನ್ನು ಸರ್ಕಾರ ತೋರಿಸಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಈಶ್ವರ್ ಸಿಂಗ್ ಕವಿತಾಳ್ ಅಸಮಾಧಾನಗೊಂಡರು.
2009ರಲ್ಲಿ ಇದ್ದಂತಹ ಒಟ್ಟು ಸನ್ನದುಗಳ ಸಂಖ್ಯೆ 8306 ಈಗ 11 ಸಾವಿರ ದಾಟಿದೆ. ಮಾರಾಟದಲ್ಲಿ ಏರಿಕೆ ಇಲ್ಲ. ಖರ್ಚು, ವೆಚ್ಚ 2 ಪಟ್ಟು ಹೆಚ್ಚಾಗಿವೆ. ಶೇ.10ಕ್ಕೆ ಇಳಿಸಿರುವ ಲಾಭಾಂಶವನ್ನು ಶೇ.20ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಏಕರೂಪದ ಸನ್ನದ ಶುಲ್ಕ ವಿಧಿಸಿ, ಸನ್ನದುದಾರರ ಖರೀದಿ ಮೌಲ್ಯದ ಮೇಲೆ ಶುಲ್ಕ ವಿಧಿಸಲಿ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹೆಚ್ಚು ವರಮಾನ ಬರಲಿದೆ. ಸನ್ನದುದಾರರಿಗೂ ಸಾಮಾಜಿಕ ನ್ಯಾಯ ಕೊಟ್ಟಂತಾಗುತ್ತದೆ.
ಸಿಎಲ್-2ಗಳಲ್ಲಿ ಪಾನಿಕರಿಗೆ ದರ್ಶಿನಿ ಹೋಟೆಲ್ ಮಾದರಿಯಲ್ಲಿ ನಿಂತು ಕುಡಿಯಲು (ಆಹಾರ ರಹಿತವಾಗಿ) ಅವಕಾಶ ನೀಡಬೇಕು. ತಮಿಳುನಾಡು, ಆಂಧ್ರದಲ್ಲಿ ಇಂತಹ ವ್ಯವಸ್ಥೆ ಇದೆ. ಇದರಿಂದ ಹೆಚ್ಚುವರಿ ಶುಲ್ಕ ವಿಧಿಸುವ ಕಾರಣಕ್ಕೆ ಸರ್ಕಾರಕ್ಕೂ ಆದಾಯ ಬರಲಿದೆ. ಸಿಎಲ್-9ಗಳಲ್ಲಿ ಮದ್ಯ ಪಾರ್ಸೆಲ್‍ಗೆ ಅವಕಾಶ ನೀಡಬೇಕು. ನೆರೆಯ ಮಹಾರಾಷ್ಟ್ರದಲ್ಲಿ ಈ ವ್ಯವಸ್ಥೆ ಇದ್ದು, ನಮ್ಮಲ್ಲೂ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪತ್ರಿಭಟನೆಯಲ್ಲಿ ಮಹೇಶ್ ಶೆಟ್ಟಿ, ಬಾತಿ ಶಂಕರ್, ಶ್ರೀನಾಥ್, ಆನಂದ್, ಕುಮಾರ್, ಪ್ರಭಾಕರ ಶೆಟ್ಟಿ, ಚಂದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.