ಲಸಿಕೆ ಹಾಕಿಸಿಕೊಂಡು ಜಾಗೃತಿ ಮೂಡಿಸಿ

ಉಪವಿಭಾಗಾಧಿಕಾರಿ ಮಮತಾ ಹೊಸಗೌಡ್ರು

ಹರಿಹರ, ಏ.5- ತಾಲ್ಲೂಕಿನ ಹಿರಿಯರು, ಗ್ರಾಮದ ಮುಖಂಡರು, ಜಿ.ಪಂ., ತಾ.ಪಂ. ಹಾಗೂ  ಗ್ರಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೊರೊನಾ ರೋಗದ ಲಸಿಕೆಯನ್ನು ಹಾಕಿಸಿಕೊಂಡು ಜಾಗೃತಿ ಮೂಡಿಸಬೇಕು. ಜೊತೆಗೆ ಸಾರ್ವಜನಿಕರು ತಮ್ಮ ಆರೋಗ್ಯ ದೃಷ್ಟಿಯಿಂದ ಕೊರೊನಾ ಲಸಿಕೆ ಸದುಪಯೋಗ ಪಡಿಸಿಕೊಂಡರೆ ಮಾತ್ರ ಕೊರೊನಾ ರೋಗ  ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡ್ರು ತಿಳಿಸಿದರು.

ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಕೊರೊನಾ ರೋಗವನ್ನು ತಡೆಗಟ್ಟುವ ಕುರಿತು ಕರೆದಿದ್ದ  ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರು ರೋಗದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಸರ್ಕಾರ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಲಸಿಕೆ ಹಾಕಲು ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತಿದೆ.  ಜೊತೆಗೆ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಲಸಿಕೆ  ಹಾಕಿಸಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ಭಾವಿಸುವುದು ಸಹ ತಪ್ಪು ಗ್ರಹಿಕೆ ಆಗುತ್ತದೆ. ಲಸಿಕೆ ಹಾಕಿಸಿಕೊಂಡರೂ ಕೂಡ ಕಾಯಿಲೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಸಡ್ಡೆ ತೋರಿಸದೆ ಸರ್ಕಾರದ ಆದೇಶ ಪಾಲನೆ ಮಾಡುವ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳಿರಿ ಎಂದರು.

ಸಾರ್ವಜನಿಕರು ಹೆಚ್ಚಾಗಿ ಸೇರುವಂತಹ ಸ್ಥಳಗಳಲ್ಲಿ ಸರ್ಕಾರದ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.  ಪ್ರತಿ ಗ್ರಾಮ ಪಂಚಾಯ್ತಿಯ ಆರೋಗ್ಯ ಸಿಬ್ಬಂದಿಗಳು, ಪಿಡಿಓ  ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಈ ಕೆಲಸಕ್ಕೆ ಹೆಚ್ಚು ಬಳಸಿಕೊಳ್ಳುವ ಮೂಲಕ ಕೊರೊನಾ ರೋಗವನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಈ ಸಂದರ್ಭದಲ್ಲಿ ತಾಲ್ಲೂಕಿನ ಮರಳಹಳ್ಳಿ ಗ್ರಾಮದ ಕುಟುಂಬದ ಸದಸ್ಯರು ತಮ್ಮ ಆಸ್ತಿಯಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರನ್ನು ಸ್ಥಳದಿಂದ ತೆರವು ಮಾಡುವಂತೆ ಮನವಿ ಮಾಡಿದರು.

ಈ ವೇಳೆ ಮರಳಹಳ್ಳಿ ಗ್ರಾಮದ ಚಂದ್ರಪ್ಪ ಮಾತನಾಡಿ ಸರ್ವೆ ನಂ 1 ರಲ್ಲಿ 12.24 ಗುಂಟೆ ಜಮೀನು ಇದ್ದು ಅದರಲ್ಲಿ ಸರ್ಕಾರ ಹಲವಾರು ವರ್ಷಗಳ ಹಿಂದೆ 1 ಎಕರೆ ಭೂಮಿಯನ್ನು ಭೂ ಸ್ವಾಧೀನ ಪಡಿಸಿಕೊಂಡಿದೆ ಎಂದು ಪಹಣಿಯಲ್ಲಿ ತೋರಿಸುತ್ತಿದೆ. ಆದರೆ ಆ ಭೂ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಇವತ್ತಿನವರೆಗೂ ಒಂದು ನಯಾ ಪೈಸೆ ಪರಿಹಾರ ನೀಡಿಲ್ಲ ಮತ್ತು ರಸ್ತೆಗೆಂದು ಮೀಸಲಿದ್ದ ಪ್ರದೇಶದಲ್ಲಿ ಕೆಲವರು ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದು,  ಓಡಾವುದಕ್ಕೂ ತೊಂದರೆ ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ. ರಾಮಚಂದ್ರಪ್ಪ. ಇಓ ಜೆ.ಡಿ. ಗಂಗಾಧರನ್, ದುರುಗಮ್ಮ, ಗಂಗಮ್ಮ ಹಾಗು ಇನ್ನಿತರರು ಹಾಜರಿದ್ದರು.

error: Content is protected !!