ಬೆಳ್ಳೂಡಿ ಶಾಖಾಮಠದಲ್ಲಿ ಗಮನ ಸೆಳೆದ ಮಹಾಕುಂಭಾಭಿಷೇಕ, ದೊಡ್ಡ ಎಡೆ ಪೂಜೆ

ಮಲೇಬೆನ್ನೂರು, ಏ.5- ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾಮಠದಲ್ಲಿ ಸೋಮವಾರ ನೂತನ ಹೊರ ಬೀರದೇವರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮಗಳು ಬೀರದೇವರುಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿದವು.

ದೇವರ ಪ್ರಾಣ ಪ್ರತಿಷ್ಠಾಪನೆ ನಂತರ ಅಭಿಷೇಕ, ಪೂಜೆಗಳು ಮತ್ತು ಬೀರದೇವರುಗಳಿಗೆ ದೊಡ್ಡ ಎಡೆಪೂಜೆ ಮಾಡುವ ಮೂಲಕ 3 ದಿನಗಳ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಯಿತು. ಸಂಜೆ ಎಲ್ಲಾ ಬೀರದೇವರುಗಳಿಗೆ ವಸ್ತ್ರ, ಅಕ್ಕಿ, ಕಾಣಿಕೆ, ಹಣ್ಣು-ಕಾಯಿ ನೀಡಿ ಬೀಳ್ಕೊಡಲಾಯಿತು.

ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಹೊಸದುರ್ಗದ ಕುಂಚಿಟಿಗರ ಗುರುಪೀಠದ ಡಾ. ಶ್ರೀ ಶಾಂತವೀರ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಅಂಬಿಗರ ಚೌಡಯ್ಯ ಸ್ವಾಮೀಜಿ, ರಾಮಾನುಜ ಮಠದ ಶ್ರೀ ತ್ರಿದಂಡಿ ವೆಂಕಟರಾಮಾನುಜ ಜೀಯರ್‌, ಸ್ವಾಮಿ ಅಮೋಘಸಿದ್ದ ಸಿದ್ದೇಶ್ವರಾನಂದರು ಸೇರಿದಂತೆ ವಿವಿಧ ಪೂಜ್ಯರು ಭಾಗವಹಿಸಿದ್ದರು.

ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ತಾ. ಕುರುಬ ಸಮಾಜದ ಕಾರ್ಯದರ್ಶಿ ಕೆ.ಪಿ. ಗಂಗಾಧರ್‌, ನಿವೃತ್ತ ಅಧಿಕಾರಿಗಳಾದ ಭಾನುವಳ್ಳಿ ಚಂದ್ರಪ್ಪ, ಕುಣೆಬೆಳಕೆರೆ ದೇವೇಂದ್ರಪ್ಪ, ಉದ್ಯಮಿ ನಂದಿಗಾವಿ ಶ್ರೀನಿವಾಸ್‌, ಶಿಕ್ಷಕ ಪದ್ದಪ್ಪ, ಉಪನ್ಯಾಸಕ ಬೀರೇಶ್‌, ಮಲೇಬೆನ್ನೂರಿನ ಪಿ.ಹೆಚ್‌. ಶಿವು, ಭೋವಿಕುಮಾರ್‌ ಮತ್ತಿತರರು ಈ ವೇಳೆ ಹಾಜರಿದ್ದರು.

ಸಿಪಿಐ ಸತೀಶ್‌, ಹರಿಹರ ಗ್ರಾಮಾಂತರ ಪಿಎಸ್‌ಐ ರವಿಕುಮಾರ್‌ ನೇತೃತ್ವದಲ್ಲಿ ಮೂರು ದಿನವೂ ಸೂಕ್ತ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

error: Content is protected !!