ಪುರುಷೋತ್ತಮಾನಂದಪುರಿ ಸ್ವಾಮೀಜಿ
ಹರಪನಹಳ್ಳಿ, ಏ.5- ರಾಜ್ಯ ಸರ್ಕಾರ, ಉಪ್ಪಾರ ಸಮಾಜವನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದೆ ಹೋದರೆ ಬೀದರ್‌ನಿಂದ ಬೆಂಗಳೂರುವರೆಗೆ ಹೋರಾಟ ರೂಪಿಸಲಾಗುವುದು ಎಂದು ಹೊಸದುರ್ಗ ಭಗೀರಥ ಪೀಠದ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಉಪ್ಪಾರ ಸಮುದಾಯ ಭವನದಲ್ಲಿ ತಾಲ್ಲೂಕು ಉಪ್ಪಾರ ಸಂಘ, ಉಪ್ಪಾರ ನೌಕರರ ಸಂಘ ಹಾಗೂ ಉಪ್ಪಾರ ಯುವಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಳೆದ 40 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದು, ಇದೀಗ ಪ್ರವರ್ಗ 1ರಲ್ಲಿ ಇದ್ದು ಅನೇಕ ಸಮಾವೇಶಗಳನ್ನು ಮಾಡಲಾಗಿದೆ. ಆದರೂ ಇದುವರೆಗೂ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆ ಯಾಗಿಲ್ಲ. ದಕ್ಷಿಣ ಕನ್ನಡ, ಉಡುಪಿ, ಮಂಗಳೂರುಗಳಲ್ಲಿ ವಿವಿಧ ಹೆಸರುಗಳಲ್ಲಿ ಮೀಸಲಾತಿ ಪಟ್ಟಿಯಲ್ಲಿದ್ದಾರೆ. ರಾಷ್ಟ್ರದಾದ್ಯಂತ ಒಳಗೊಂಡು ರಾಜ್ಯದಲ್ಲಿ 23 ಪಂಗಡಗಳಿಂದ ಗುರುತಿಸಿಕೊಂಡಿರುವ ಸಮುದಾಯಕ್ಕೆ ನಾಲ್ಕೈದು ರಾಜ್ಯಗಳಲ್ಲಿ ಈಗಾಗಲೇ ಮೀಸಲಾತಿ ಇದ್ದು, ಸಮುದಾಯದ ಕುಲಶಾಸ್ತ್ರೀಯ ಅಧ್ಯಯನವಾಗಲು ಹಿಂದಿನ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಹಂಪಿ ವಿವಿಯಿಂದ ಈಗಾಗಲೇ ಸಮಗ್ರ ವರದಿ ತಯಾರಿಸಲು ಸಿದ್ದರಾಗಿದ್ದಾರೆ. ಸರ್ಕಾರ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಸಜ್ಜಾಗುವಂತೆ ಸಮುದಾಯಕ್ಕೆ ಕರೆ ನೀಡಿದರು.
ಶಾಸಕ ಜಿ. ಕರುಣಾಕರ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ವಸ್ತುಗಳನ್ನು ಕಳ್ಳತನ ಮಾಡಬಹುದು. ಆದರೆ ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯೆಯ ಮೂಲಕ ಉನ್ನತ ಹುದ್ದೆ ಪಡೆಯಲು ಸಾಧ್ಯ ಎಂದ ಅವರು, ಉಪ್ಪಾರ ಸಮಾಜ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ.ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ. ಗಿರೀಶ್ ಮಾತನಾಡಿ ರಾಜ್ಯದಲ್ಲಿ ರಾಜಕೀಯವಾಗಿ ಮೀಸಲಾತಿ ಅಗತ್ಯವಿದ್ದು, ನಮ್ಮ ಸಮುದಾಯದ ಸಿ. ಪುಟ್ಟರಂಗ ಶೆಟ್ಟಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದ ಅವರು ನಮ್ಮ ಹಕ್ಕುಗಳನ್ನು ಪಡೆಯಲು ಸರ್ಕಾರಕ್ಕೆ ಸೆಡ್ಡು ಹೊಡೆದು ಕೇಳವಂತಾಗಲು ಎಲ್ಲರು ಒಗ್ಗಟ್ಟಾಗಬೇಕು. ಇದಕ್ಕಾಗಿ ಮುಂದಿನ ದಿನಗಳಲ್ಲಿ ಬೀದರ್‌ನಿಂದ ಚಾಮರಾಜ ನಗರದವರೆಗೂ ಸಂಘಟನೆಯನ್ನು ಸಂಘಟಿಸಲಾಗುವುದು ಎಂದರು.
ಕೆಪಿಸಿಸಿ ರಾಜ್ಯ ಓಬಿಸಿ ಘಟಕದ ಉಪಾಧ್ಯಕ್ಷ ಡಾ. ಉಮೇಶಬಾಬು ಮಾತನಾಡಿ ನಮ್ಮ ಸಮಾಜ ಉನ್ನತ ಮಟ್ಟದಲ್ಲಿ ಬೆಳೆಯಲು ದ್ವೇಷ, ಅಸೂಯೆ ಬಿಟ್ಟು ಸಂಘಟಿತರಾಗಿ. ಮಕ್ಕಳ ಭವಿಷಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಿ, ಶ್ರೀಗಳ ಮಾರ್ಗದರ್ಶನದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಮಾಜದ 3 ಜನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗುತ್ತೇನೆ ಎಂದರು.
ಶಿಕ್ಷಕಿ ಸುಭದ್ರ ಮಾಡ್ಲಿಗೇರಿ ಉಪ್ಪಾರ ಸಮುದಾಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಾಲ್ಲೂಕು ಅಧ್ಯಕ್ಷ ಜಿ. ಹನುಮಂತಪ್ಪ, ಪುರಸಭೆ ಸದಸ್ಯ ಗೊಂಗಡಿ ನಾಗರಾಜ, ನೌಕರರ ಸಂಘದ ಅಧ್ಯಕ್ಷ ಎಂ.ರಮೇಶ್ , ಕೊಟ್ರೇಶ್, ಯುವಕರ ಸಂಘದ ಅಧ್ಯಕ್ಷ ಎಸ್.ರಾಜೇಂದ್ರ, ಮುಖಂಡರಾದ ಕೆ. ವೆಂಕಟೇಶ್, ಎನ್. ತಿಪ್ಪಣ್ಣ, ಎನ್.ಎಸ್. ಚಂದ್ರಪ್ಪ, ಎನ್.ಬಿ.ಲೋಕೇಶ್, ಈಶಪ್ಪ, ಪಿ. ಗಣೇಶ, ಹನುಮಂತಪ್ಪ, ಮಂಜುನಾಥ, ಶೇಖರಪ್ಪ, ಟಿ. ತಿಮ್ಮಪ್ಪ ಇನ್ನಿತರರಿದ್ದರು.