ದಕ್ಷತೆಯಿಂದ ಕೆಲಸ ಮಾಡಿದಾಗ ಜನರು ಸಹಕಾರ ನೀಡುವುದರಲ್ಲಿ ಅನುಮಾನವಿಲ್ಲ

ಹರಿಹರದ ಕಾರ್ಯಕ್ರಮದಲ್ಲಿ ಪೊಲೀಸ್ ಡಿವೈಎಸ್ಪಿ ನರಸಿಂಹರಾಜು ಪ್ರತಿಪಾದನೆ

ಹರಿಹರ, ಫೆ.2- ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹುಮುಖ್ಯವಾಗಿದ್ದು, ದಕ್ಷತೆಯಿಂದ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾದ ಸಿಪಿಐ ಶಿವಪ್ರಸಾದ್, ಪಿಎಸ್ಐ ಶೈಲಾಶ್ರೀ ಶ್ಲಾಘನೀಯ ಎಂದು  ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು.

ನಗರದ ಪೊಲೀಸ್ ಠಾಣೆಯ ಆವರಣ ದಲ್ಲಿ ವರ್ಗಾವಣೆ ಗೊಂಡಿರುವ ಸಿಪಿಐ ಶಿವಪ್ರಸಾದ್, ಪಿಎಸ್ಐ ಶೈಲಾಶ್ರೀ ಹಾಗೂ ಪಿಎಸ್‌ಐ ಆಗಿ ಬಡ್ತಿ ಹೊಂದಿದ ಶ್ರೀನಿವಾಸ್ ಅವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಮತ್ತು ನಗರ ಠಾಣೆಗೆ ಸಿಪಿಐ ಆಗಿ ಬಂದಿರುವ ಸತೀಶ್ ಕುಮಾರ್, ಪಿಎಸ್ಐ ಬಸವರಾಜ್ ತೆಲಿ ಅವರನ್ನು ಸ್ವಾಗತಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಪಿಐ ಶಿವಪ್ರಸಾದ್ ಅವರು ಕರ್ತವ್ಯದ ಮೇಲೆ ನಗರಕ್ಕಾಮಿಸಿದ ಸಂದರ್ಭದಲ್ಲಿ ಒಂದು ಸಣ್ಣ ಘಟನೆ ನಡೆದು 144 ನೇ ಸೆಕ್ಷನ್ ಜಾರಿ ಮಾಡಲಾಯಿತು. ಆ ಸಂದರ್ಭದಲ್ಲಿ  ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದ  ಇಲಾಖೆಯ ಅಧಿಕಾರಿಗಳು ಶ್ರಮ ವಹಿಸಿ ಘಟನೆಯನ್ನು ತಹಬಂದಿಗೆ ತಂದರು. ಕೊರೊನಾ ತಡೆಗಟ್ಟುವಿಕೆ ತಾಲ್ಲೂಕು ಆಡಳಿತ, ನಗರಸಭೆ, ಆರೋಗ್ಯ ಇಲಾಖೆ ಜೊತೆಗೆ ಪೊಲೀಸ್ ಇಲಾಖೆಗೆ ಒಂದು ದೊಡ್ಡ ಸವಾಲಿನ ಕಾರ್ಯವಾಗಿತ್ತು. ವಾಸನ, ನಂದಿಗುಡಿ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಹೊರ ರಾಜ್ಯದ ಜನರು ಉಳಿದುಕೊಳ್ಳಲು ವ್ಯವಸ್ಥೆ ಮಾಡುವಾಗ ಸ್ಥಳೀಯ ಗ್ರಾಮಸ್ಥರು ವಿರೋಧ ಮಾಡಿದರು. ಅದನ್ನು ಸಮರ್ಥವಾಗಿ ಶಿವಪ್ರಸಾದ್ ತಂಡವು ನಿರ್ವಹಿಸಿದ್ದು, ಇತರೆ ಅಧಿಕಾರಿಗಳಿಗೆ ಮಾರ್ಗದರ್ಶನವಾಯಿತು ಎಂದರು.

ಡಿವೈಎಸ್ಪಿ ನರಸಿಂಹರಾಜು ಮಾತನಾಡಿ, ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಹದಗೆಡದಂತೆ ನೋಡಿಕೊಂಡು ಕರ್ತವ್ಯವನ್ನು ಮಾಡುವಾಗ ಕೆಲವು ಸಣ್ಣಪುಟ್ಟ ವ್ಯತ್ಯಾಸ ಆಗುವುದು ಸಹಜ. ಆದರೆ ದಕ್ಷತೆಯಿಂದ ಕೆಲಸ ಮಾಡಿದಾಗ ಜನರು ಸಹ ಉತ್ತಮ ರೀತಿಯಲ್ಲಿ ಸಹಕಾರ ನೀಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.

ಗಿರಿಯಮ್ಮ ಕಾಲೇಜು ನಿವೃತ್ತ ಪ್ರಾಂಶುಪಾಲ ಎಸ್.ಹೆಚ್. ಪ್ಯಾಟಿ ಮಾತನಾಡಿ, ಕೆಲವೊಂದು ದಕ್ಷ ಅಧಿಕಾರಿ ಗಳಿಂದ ಇಲಾಖೆಗೆ ಸಮಾಜದಲ್ಲಿ ಗೌರವ ಇದೆ. ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ರಾಜಕಾರಣಿಗಳು ಹಸ್ತಕ್ಷೇಪ ಮಾಡದಿದ್ದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಲು ಅಧಿಕಾರಿಗಳಿಗೆ ದಾರಿಯಾಗಲಿದೆ ಎಂದು ಹೇಳಿದರು.

ಸಿಪಿಐ ಶಿವಪ್ರಸಾದ್, ನಗರ ಠಾಣೆಯ ಸಿಪಿಐ ಸತೀಶ್ ಕುಮಾರ್, ಮಲೇಬೆನ್ನೂರು ಠಾಣೆ ಪಿಎಸ್ಐ ವೀರಬಸಪ್ಪ, ಗುತ್ತೂರು ಗ್ರಾಮಾಂತರ ಠಾಣೆ ಪಿಎಸ್ಐ ಡಿ. ರವಿಕು ಮಾರ್, ನಗರಸಭೆ ಪೌರಾಯುಕ್ತ ಉದಯ ಕುಮಾರ್ ಇನ್ನಿತರರು ಮಾತನಾಡಿದರು. 

ಪಿಎಸ್ಐ ಶೈಲಾಶ್ರೀ, ಶ್ರೀನಿವಾಸ್, ನಿಂಗನಗೌಡ್ರು, ಸಿಬ್ಬಂದಿಗಳಾದ ಡಿ.ಟಿ. ಶ್ರೀನಿವಾಸ್, ಸತೀಶ್, ಲಿಂಗರಾಜ್, ಮಂಜುನಾಥ, ಮುರುಳೀಧರ್, ಸಿದ್ದಪ್ಪ ಇನ್ನಿತರರು ಹಾಜರಿದ್ದರು.

error: Content is protected !!