ಬೆಲೆ ಪಾತಾಳಕ್ಕಿಳಿದು ಕೇಳುವವರಿಲ್ಲದೆ, ರಂಟೆ ಹೊಡೆದು ನೆಲದಲ್ಲಿ ಮುಚ್ಚುವ ಕೆಲಸ ಮಾಡುತ್ತಿರುವ ರೈತರು
ಹರಪನಹಳ್ಳಿ, ಫೆ.1- ಮಹಾಮರಿ ಕೊರೊನಾ ವೈರಸ್ನಿಂದ ಇಡೀ ವಿಶ್ವವೇ ಕಂಗಾಲಾಗಿದ್ದು ರೈತರು, ಬಡವರು, ನಿರ್ಗತಿಕರು, ಅಲೆಮಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರ ನಿತ್ಯ ಬದುಕಿಗಾಗಿ ಬವಣೆಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಒಂದಡೆಯಾದರೆ, ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ರೈತನ ಬದುಕು ಶೋಚನೀಯವಾಗಿದೆ.
ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾ ಗಿದ್ದು, ತಾಲ್ಲೂಕಿನ ಪ್ರಮುಖ ಬೆಳೆಯಾದ ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಸಿಗದೆ ರೈತ ಪರದಾ ಡುತ್ತಿದ್ದಾನೆ. ಅದರಲ್ಲೂ ತರಕಾರಿ ಬೆಳೆಗಳಾದ ಟೊಮ್ಯಾಟೋ, ಎಲೆ ಕೋಸು ಬೆಳೆದ ರೈತರಿಗೆ ಸರಿಯಾದ ಬೆಲೆ ಸಿಗದೇ, ಇತ್ತ ಕೈಗೆ ಬಂದ ಫಸಲು ಕೀಳದೆ ಹೊಲದಲ್ಲೇ ಕೊಳೆಯುತ್ತಿದೆ. ತಾಲ್ಲೂಕಿನ ಜಂಗಮ ತುಂಬಿಗೆರೆ ಪ್ರಗತಿಪರ ರೈತ ಕೆ.ಜಿ. ಅಜ್ಜನ ಗೌಡ ಮಾತನಾಡಿ, ತಮ್ಮ 1.5 ಎಕರೆ ಹೊಲದಲ್ಲಿ 40 ಸಾವಿರ ಖರ್ಚು ಮಾಡಿ ಎಲೆಕೋಸು ಬೆಳೆದಿ ದ್ದು, ಈಗ ಕಟಾವಿಗೆ ಬಂದಿದ್ದು ಭರಮಸಾಗರ, ಹರಪನಹಳ್ಳಿ, ದಾವಣಗೆರೆ ಮಧ್ಯವರ್ತಿಗಳು ರೈತರ ಹೊಲಗಳಿಗೆ ಬಂದು ಖರೀದಿ ಮಾಡುತ್ತಿದ್ದರು. ಈ ವರ್ಷ ನಾವು ಫೋನ್ ಮಾಡಿದರೂ ಸರಿಯಾದ ಉತ್ತರವಿಲ್ಲ. ನಮಗೆ 1 ರೂ. ಕೇಜಿಗೆ ಖರೀದಿ ಮಾಡಿ ಎಂದು ಅಂಗಲಾಚಿದರೂ ಕೇಳುವವರಿಲ್ಲ. ತಾಲ್ಲೂ ಕಿನ ರಾಮಘಟ್ಟ, ಹೊಸಕೋಟೆ, ಮಾದಿಹಳ್ಳಿ ರಾಮಘಟ್ಟ ತಾಂಡಾ, ಬೂದಿಹಾಳ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಎಲೆಕೋಸು ಬೆಳೆದು ಸರಿಯಾದ ಬೆಲೆ ಸಿಗದೆ ರಂಟೆ ಹೊಡೆದು ನೆಲದಲ್ಲಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಇತರೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ರೈತರು ಬೆಳೆದ ಬೆಳೆಗಳು ನೆಲಕಚ್ಚಿದ್ದು ರೈತರು ಕೊಳ್ಳುವ ಎಲ್ಲಾ ವಸ್ತುಗಳು ಗಗನಕ್ಕೇರಿದ್ದು, ಈಗಿನ ಯುವ ಜನತೆ ವ್ಯವಸಾಯದಿಂದ ದೂರ ಉಳಿಯುತ್ತಿದ್ದು, ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳು ಕೊರತೆಯಾಗುವುದು ನಿಶ್ಚಿತ. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವ್ಯವಸಾಯ ಅಳಿವಿನ ಅಂಚಿನಲ್ಲಿ ಸರಿದುಹೋಗುತ್ತದೆ ಎಂದರು.
ಒಟ್ಟಾರೆ ರೈತ ಸಾಲದ ಸುಳಿಯಲ್ಲಿ ಸಿಕ್ಕು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಹತ್ಮಹತ್ಯೆ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿವೆ ಎಂದರೆ ತಪ್ಪಾಗಲಾರದು.
– ಕೆ. ಉಚ್ಚೆಂಗೆಪ್ಪ,
[email protected]