ಹರಪನಹಳ್ಳಿ, ಏ.4- ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ. ಊರು ಬಿಡುವ ಪರಿಸ್ಥಿತಿ ಎದುರಾಗಿದ್ದು, ಗುತ್ತಿಗೆದಾರರು ಕಾನೂನು ಮೊರೆ ಹೋಗುತ್ತಿದ್ದಾರೆ. ಅಧಿಕಾರಿಗಳು ಜವಾಬ್ದಾರಿ ವಹಿಸದೆ, ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗುತ್ತಿದೆ ಎಂದು ತಾ.ಪಂ. ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜ್ಯಾನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿಯ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಮೊನ್ನೆ ನಡೆದ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಯನಿರ್ವಹಣಾಧಿ ಕಾರಿಯ ಗೈರು ಹಾಜರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಅಳ ಲನ್ನು ಅಧಿಕಾರಿಗಳ ಮುಂದೆ ತೋಡಿಕೊಂಡರು.
ತಾ.ಪಂ. ಸದಸ್ಯರು ಅನುದಾನದ ಭರವಸೆ ಯಿಂದ ಕ್ಷೇತ್ರದ ಅಭಿವೃದ್ದಿಗೆ ಗುತ್ತಿಗೆದಾರರಿಂದ ಕೆಲಸ ಮಾಡಿಸಿದ್ದಾರೆ. ಆದರೆ ಅವರಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಏಕೆ ? ನಮ್ಮ ಹಣೆಬರಹ ಹೇಗಾಗಿದೆ ಎಂದರೆ ಹರಪನಹಳ್ಳಿ ತಾಲ್ಲೂಕು ಬಳ್ಳಾರಿಯಿಂದ ದಾವಣಗೆರೆ, ದಾವಣಗೆರೆಯಿಂದ ಬಳ್ಳಾರಿ, ಇದೀಗ ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಿದೆ. ತಾಲ್ಲೂಕಿನ ಅನುದಾನದ ಬಿಡುಗಡೆಗೆ ಕೆ2 ತಾಂತ್ರಿಕವಾಗಿ ತೊಡಕಾಗಿದೆ ಎಂದು ಅಧ್ಯಕ್ಷರು ಹೇಳಿಕೊಂಡರೆ, ಯಾವುದೋ ನೆಪದಲ್ಲಿ ಅನುದಾನ ಬಾರದಿರುವುದರಿಂದ ನಮ್ಮ ಬದುಕು ಹೇಗೆ ನಡೆಸಬೇಕು ಎಂದು ಉಪಾಧ್ಯಕ್ಷರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಗ್ರಾಮಗಳಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಕ್ರಮವಹಿಸಲಾಗುತ್ತಿದೆ. ಬಹು ಗ್ರಾಮ ಯೋಜನೆಯಲ್ಲಿ ಆದಷ್ಟು ಬೇಗ ಗ್ರಾಮಗಳಿಗೆ ನೀರನ್ನು ಒದಗಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ತಿಳಿಸಲಾಗುವುದು ಎಂದು ಕುಡಿಯುವ ನೀರು ವಿಭಾಗದ ಎಇಇ ಸಿದ್ಧರಾಜು ಮಾಹಿತಿ ನೀಡಿದರು.
ಕಳೆದ ವರ್ಷದಲ್ಲಿ ರೈತರು ಸಲ್ಲಿಸಿದ ಜಾತಿ ಆದಾಯ ಪತ್ರದಲ್ಲಿನ ಲೋಪದೋಷ ಸರಿಪಡಿಸಿ ಕೊಟ್ಟಲ್ಲಿ ಅವರಿಗೆ ತಾಡಪಾಲ್ ಕೊಡಲಾಗುವುದು. ಈ ಬಾರಿಯು ಫಲಾನುಭವಿಗಳ ಪಟ್ಟಿ ನೀಡಿದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಮಂಜುನಾಥ ಗೊಂದಿ ಸಭೆಗೆ ಮಾಹಿತಿ ನೀಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಯಂತ್ರಗಳ ದುರಸ್ತಿಯನ್ನು ಸಕಾಲದಲ್ಲಿ ಮಾಡಿಸದೆ ರೋಗಿಗಳಿಗೆ ತೊಂದರೆಯಾಗಿದೆ. ಕಣ್ಣಿನ ವೈದ್ಯರು ಕಳೆದ ಆರು ತಿಂಗಳಿಂದಲೂ ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಬಡ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರಿಪಡಿಸಿ ಎಂದು ಸಾರ್ವಜನಿಕ ಆಸ್ಪತ್ರೆ ಅಧಿಕಾರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ 13 ಸಾವಿರಕ್ಕೂ ಅಧಿಕ ಸಾರ್ವಜನಿಕರು ಕೊರೊನಾ ಲಸಿಕೆ ಪಡೆದಿದ್ದಾರೆ. ಮಾ.1ರಿಂದ ತಾಲ್ಲೂಕಿನಲ್ಲಿ 22 ಕೊರೊನಾ ಪಾಸಿಟಿವ್ ರೋಗಿಗಳು ಪತ್ತೆಯಾಗಿ ದ್ದಾರೆ. ಅವರುಗಳಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆ, ತೋಟಗಾರಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ವಿಜಯಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.