ದಾವಣಗೆರೆ, ಏ.4- ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಚಿತ್ರದುರ್ಗ ಮತ್ತು ಕನ್ನಡ ಭಾಷಾಧ್ಯಯನ ವಿಭಾಗ ಹಾಗೂ ಶ್ರೀರಂಗ ದತ್ತಿನಿಧಿ, ಕನ್ನಡ ವಿವಿ ಹಂಪಿ ಇವುಗಳ ಸಹಯೋಗದಲ್ಲಿ ಕನ್ನಡ ರಂಗಭೂಮಿ ಮತ್ತು ಭಾಷೆ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ಹಂಪಿ ವಿವಿ ಕುಲಪತಿ ಪ್ರೊ. ಸ.ಚಿ. ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮಗಳ ಪ್ರಭಾವದಿಂದಾಗಿ ರಂಗಭೂಮಿ ಕಲೆಗಳು ಸೊರಗುತ್ತಿವೆ. ಸಾಂಸ್ಕೃತಿಕ ಕಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯುವ ಜರೂರಿದೆ ಎಂದರು.
ದಾವಣಗೆರೆ ವಿವಿ ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ರಂಗಭೂಮಿ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳು. ಇದು ಮನರಂಜನೆಗಾಗಿ ಉದಯವಾದರೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸದಾ ಜೀವಂತವಾಗಿಡುವಲ್ಲಿ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ವೃತ್ತಿ ರಂಗಭೂಮಿ ಮತ್ತು ಭಾಷೆ ವಿಷಯ ಕುರಿತು ಪ್ರೊ. ರಾಜಪ್ಪ ದಳವಾಯಿ ಪ್ರಬಂಧ ಮಂಡಿಸಿದರು. ಡಾ. ಕೆ. ನಾರಾಯಣಸ್ವಾಮಿ, ರೂಪೇಶ್ ಕುಮಾರ್, ಡಾ. ಎಚ್.ಜಿ. ವಿಜಯಕುಮಾರ್ ವಿಷಯ ವಿಸ್ತರಣೆ ಮಾಡಿದರು. ಎರಡನೇ ಗೋಷ್ಠಿಯಲ್ಲಿ ಹವ್ಯಾಸಿ ರಂಗಭೂಮಿ ಮತ್ತು ಭಾಷೆ ವಿಷಯದ ಕುರಿತು ವಿಮರ್ಶಕ ಡಾ. ಕೆ.ವೈ. ನಾರಾಯಣಸ್ವಾಮಿ ಪ್ರಬಂಧ ಮಂಡಿಸಿದರು. ಡಾ. ಕೆ. ಮಲ್ಲಿಕಾರ್ಜುನ, ಡಾ. ವಿ. ಜಯರಾಮಯ್ಯ, ಜೋಶಿ, ಡಾ. ಬಿ. ಬಸವರಾಜ್, ಡಾ. ಮಹಾಂತೇಶ ಪಾಟೀಲ, ಡಾ. ಹೆಚ್.ವಿ. ಶಾಂತರಾಜು, ಎಚ್.ಆರ್. ಮದಕರಿನಾಯಕ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ವಿವಿಯ ನಿಕಾಯದ ಡೀನ್ ಪ್ರೊ. ಕೆ.ಬಿ. ರಂಗಪ್ಪ, ಹಂಪಿ ಕನ್ನಡ ವಿವಿ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ. ಪಾಂಡುರಂಗ ಬಾಬು ಉಪಸ್ಥಿತರಿದ್ದರು. ವಿವಿಯ ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರದ ಸಂಯೋಜನಾಧಿಕಾರಿ ಡಾ. ಹೆಚ್. ವಿಶ್ವನಾಥ್ ಸ್ವಾಗತಿಸಿದರು. ಶ್ರೀರಂಗ ದತ್ತಿನಿಧಿಯ ಸಂಚಾಲಕ ಡಾ. ಅಶೋಕ್ ರಂಜೇರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಭೀಮಾಶಂಕರ ಜೋಷಿ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಆರ್. ರೂಪೇಶ್ ಕುಮಾರ್ ವಂದಿಸಿದರು.