ಹಿರಿಯ ರಂಗ ತಜ್ಞರೂ, ಸಿನಿಮಾ ನಿರ್ದೇಶಕರೂ ಆದ ಬಿ. ಸುರೇಶ್ ಪ್ರತಿಪಾದನೆ
ದಾವಣಗೆರೆ, ಜ.31 – ಪರಿಪೂರ್ಣ ಜ್ಞಾನದಿಂದ ಮಾತ್ರ ಒಂದು ರಂಗದ ವಿಮರ್ಶೆ ಸಾಧ್ಯ ಎಂದು ಹಿರಿಯ ರಂಗ ತಜ್ಞರೂ, ಸಿನಿಮಾ ನಿರ್ದೇಶಕರೂ ಆದ ಬಿ. ಸುರೇಶ್ ಪ್ರತಿಪಾದಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ದಾವಣಗೆರೆ ವಿಶ್ವವಿದ್ಯಾನಿಲಯ, ಜಿಲ್ಲಾ ವರದಿ ಗಾರರ ಕೂಟ, ಜಿಲ್ಲಾ ಕಾರ್ಯನಿರತ ಪತ್ರಕ ರ್ತರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ದಾವಣಗೆರೆ ವಿವಿ ಎಂಬಿಎ ಸಭಾಂಗಣದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ರಂಗ ವಿಮರ್ಶಾ ಕಮ್ಮಟದಲ್ಲಿ `ಲಿಖಿತ ಪಠ್ಯ-ರಂಗ ಪಠ್ಯ ಮತ್ತು ವಿಮರ್ಶೆಯ ಹಾದಿ’ ವಿಷಯ ಕುರಿತ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಂಗ ವಿಮರ್ಶೆ ಮಾಡಬೇಕಾದರೆ ರಂಗಭೂಮಿ ಬಗ್ಗೆ ಸಂಪೂರ್ಣ ಅಧ್ಯಯನ ಅವಶ್ಯ. ಹೂ ಅರಳುವುದು, ಹೂವು ದುಂಬಿ ಆಕರ್ಷಿಸುವ ಅಂಶಗಳು ಒಂದು ರೀತಿಯ ವಿಮರ್ಶೆಯ ಅಂಶವೇ. ಈ ಎಲ್ಲಾ ಅಂಶಗಳನ್ನು ಪತ್ರಿಕೋದ್ಯಮ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳು ನಿರಂತರ ಓದಿನಿಂದ ಜ್ಞಾನ ಪಡೆದುಕೊಂಡು ತಮ್ಮದೇ ಶೈಲಿಯಲ್ಲಿ ನಿರೂಪಿಸುವುದು ವಿಮರ್ಶೆ ಎನಿಸುತ್ತದೆ. ಒಮ್ಮೊಮ್ಮೆ ಭಿನ್ನಾಭಿಪ್ರಾಯ ಸೂಚಿಸುವುದು ಕೂಡ ವಿಮರ್ಶೆಯಾಗುತ್ತದೆ ಎಂದರು.
ಮಾನವ ಜೀವನದಲ್ಲಿ ವಿಮರ್ಶೆಗಳು ಒಂದು ರೀತಿಯ ಕಾಯಂ ಪ್ರಕ್ರಿಯೆಗಳಿದ್ದಂತೆ. ಮನುಷ್ಯ ದಿನೇ ದಿನೇ ಪ್ರಶ್ನೆಗೊಳಪಡುತ್ತಾನೆ. ಒಬ್ಬ ಮತ್ತೊಬ್ಬನನ್ನು ಪ್ರಶ್ನಿಸುವುದು, ಅನುಕರಿಸುವುದು, ತೆಗಳುವುದು ಒಂದು ರೀತಿಯ ವಿಮರ್ಶೆಯೇ ಆಗಿದೆ ಎಂದರು.
ಅನುಕರಣಾ ಮನೋಭಾವವನ್ನು ವಿಮರ್ಶಾ ಪ್ರವೃತಿಯಿಂದ ದೂರವಿಡ ಬೇಕು. ಆಗ ಯಾವುದೇ ಒಂದು ರಂಗದ ವಿಮರ್ಶೆ ಯಶಸ್ವಿಯಾಗಲು ಸಾಧ್ಯ. ಇಂದು ವಿಮರ್ಶಾ ರಂಗದಲ್ಲಿ ವಿಫುಲ ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಉತ್ತಮ ಓದು, ತಿಳುವಳಿಕೆ, ಜ್ಞಾನ ಹೆಚ್ಚಿಸಿಕೊಳ್ಳುವುದರಿಂದ ಒಳ್ಳೆಯ ಸ್ಥಾನಮಾನ ಕಲ್ಪಿಸಿಕೊಳ್ಳಬಹುದು ಹಾಗೂ ವಿಮರ್ಶೆ ಕ್ಷೇತ್ರದಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಕೊಡಲಾಗುತ್ತಿದ್ದು, ತಾವುಗಳು ಕೂಡ ಈ ಪ್ರಶಸ್ತಿ ಪಡೆಯಬಹುದಾಗಿದೆ ಎಂದರು.
ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತ ನಾಡಿ, ಇತ್ತೀಚಿನ ದಿನಗಳಲ್ಲಿ ವಿಮರ್ಶೆಯು ಟೀಕೆಯೆಂಬಂತೆ ಬಿಂಬಿತವಾಗುತ್ತಿದೆ. ವಿಮರ್ಶೆ ಮಾಡಲು ವಿಷಯದ ಬಗ್ಗೆ ಸಾಮೂಲಾಗ್ರವಾಗಿ ತಿಳಿದುಕೊಂಡಿರಬೇಕು. ವಾಸ್ತವವನ್ನು ತಿಳಿದು ಕೊಂಡು ವಿಮರ್ಶೆ ಮಾಡಬೇಕು ಎಂದರು.
ಸಾಹಿತಿ ಬಾ.ಮ.ಬಸವರಾಜಯ್ಯ, ಪತ್ರಕ ರ್ತರುಗಳಾದ ಯಳನಾಡು ಮಂಜುನಾಥ, ಮಂಜುನಾಥ ಗೌರಕ್ಕಳವರ್, ವಾರ್ತಾಧಿಕಾರಿ ಅಶೋಕ್ಕುಮಾರ್.ಡಿ, ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗುಪ್ಪಿ ಹಾಗೂ ಇತರರು ಉಪಸ್ಥಿತರಿದ್ದರು.