ದಾವಣಗೆರೆ, ಏ.4- ಸ್ಲಂ ಜನಾಂದೋಲನ ಸಂಘಟನೆ ಅಂಬೇಡ್ಕರ್ ಅವರ ಸಮಪಾಲು – ಸಮಬಾಳು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಮುನ್ನಡೆಯುತ್ತಿದೆ. ಜನಪರ ಹೋರಾಟದ ಮೂಲಕ ಒಂದು ರಾಜ್ಯದಲ್ಲಿ ಜಾಗೃತಿ ಆಂದೋಲನ ಉಂಟು ಮಾಡಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್ ಕುಮಾರ್ ಹೇಳಿದರು.
ಸ್ಲಂ ಜನಾಂದೋಲನ , ಸಾವಿತ್ರ ಬಾಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಬಾಷಾ ನಗರದ ಎಸ್.ಎಸ್. ಶಾದಿಮಹಲ್ನಲ್ಲಿ ನಿವೇಶನ ರಹಿತರ ಸಮಾವೇಶ ಹಾಗೂ ಸ್ಲಂ ನಿವಾಸಿಗಳ ಸಂಘಟನಾತ್ಮಕ ಹೋರಾಟ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಈ ಜನರ ಬದುಕಿನ ಅವಶ್ಯಕತೆಗಳಾದ ನೀರು, ಸೂರು, ಶಿಕ್ಷಣ ಹಾಗೂ ಇತರೆ ಹಕ್ಕುಗಳಿಗಾಗಿ ದಶಕದಲ್ಲಿ ಅತ್ಯಂತ ಜನಪರವಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿದರು.
ರಾಜ್ಯ ಸಂಚಾಲಕ ನರಸಿಂಹ ಮೂರ್ತಿ ಮಾತನಾಡಿ, ಕೊಳಚೆ ಪ್ರದೇಶಗಳಲ್ಲಿ ಕನಿಷ್ಟ ಜೀವನ ನಡೆಸುತ್ತಿರುವ ಸಮುದಾಯಗಳ ನೆರವಿಗೆ ಸರ್ಕಾರ ಬರಬೇಕಾಗಿದೆ. ವಸತಿ ರಹಿತರಿಗೆ ಮತ್ತು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ ವಸತಿ ಕಲ್ಪಿಸಬೇಕಾಗಿದೆ. ನಗರದಲ್ಲಿ ಎರಡು ಸಾವಿರ ವಸತಿ ರಹಿತ ಸ್ಲಂ ನಿವಾಸಿಗಳನ್ನು ಗುರುತಿಸಲಾಗಿದೆ. ಇಂದಿಗೂ ಸಹ ಮೂಲ ಸೌಕರ್ಯಗಳಿಲ್ಲದ ಕೊಳಗೇರಿಗಳಲ್ಲಿ ವಾಸವಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಪಾಲಿಕೆ ಉಪ ಆಯುಕ್ತರಾದ ನಾಗರತ್ಮಮ್ಮ ಮನವಿ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ , ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಎಸ್.ಎಲ್. ಆನಂದಪ್ಪ, ಪಾಲಿಕೆ ಸದಸ್ಯ ಅಹಮದ್ ಕಬೀರ ಖಾನ್, ಸಂಘಟನೆಯ ಜನಾರ್ದನ ಹಳ್ಳಿಬೆಂಚಿ, ಇಮ್ತಿಯಾಜ್ ಆರ್. ಮಾನ್ವಿ, ದಲಿತ ಮುಖಂಡ ಹೆಗ್ಗೆರೆ ರಂಗಪ್ಪ, ದಾದಾಪೀರ್ ಕೊಡಪಾನ್, ಸ್ಲಂ ಜನಾಂದೋಲ ಜಿಲ್ಲಾ ಸಂಘಟನೆ ಮುಖಂಡರಾದ ಎಂ. ಸಬೀರ್ ಸಾಬ್, ರೇಣುಕಾ ಯಲ್ಲಮ್ಮ, ಸಾವಿತ್ರಮ್ಮ, ದೇವೇಂದ್ರಪ್ಪ, ಬಾಲಪ್ಪ, ಸುಹೀಲ್ ಬಾಷಾ, ಮುಬಾರಕ್, ಶಾಹೀನ್ ಬೇಗಂ, ಮಂಜುಳಾ ಇನ್ನಿತರರಿದ್ದರು.