ಹೈ.ಕ. ವಿಮೋಚನಾ ಹೋರಾಟಕ್ಕೆ ಅಧಿಕೃತ ದಾಖಲೆ ಪುಸ್ತಕವಿಲ್ಲ

ವಿಮೋಚನಾ ದಿನವನ್ನು ಉತ್ಸವ ದಿನವಾಗಿ ಮಾಡಿದ ಸರ್ಕಾರದ ಕ್ರಮಕ್ಕೆ ಡಾ. ಉದಯಶಂಕರ ಪುರಾಣಿಕ ಅಸಮಾಧಾನ

ದಾವಣಗೆರೆ, ಜ. 30 – ಹೈದರಾಬಾದ್-ಕರ್ನಾಟಕ ವಿಮೋ ಚನಾ ಹೋರಾಟದ ಕುರಿತು ಸರ್ಕಾರ ಇದುವರೆಗೂ ಅಧಿಕೃತ ದಾಖಲೆ ಪುಸ್ತಕವನ್ನು ಹೊರತಂದಿಲ್ಲ. ಬದಲಾಗಿ ಹೈದರಾಬಾದ್ ಕರ್ನಾಟಕ ವಿಮೋ ಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವಾಗಿ ಪರಿವರ್ತಿಸಿದೆ ಎಂದು ಸಾಹಿತಿ ಹಾಗೂ ವಿಜ್ಞಾನಿ ಡಾ. ಉದಯಶಂಕರ ಪುರಾಣಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2020ರ ಸಾಲಿನ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡು ತ್ತಿದ್ದ ಅವರು, ಹೈದರಾಬಾದ್ ಸಂಸ್ಥಾನ ಶ್ರೀಮಂತ ಹಾಗೂ ಬಲಾಢ್ಯವಾಗಿತ್ತು. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆ ತರೂ ಹೈದರಾಬಾದ್ ಕರ್ನಾಟಕ ಮುಕ್ತವಾಗಿರಲಿಲ್ಲ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿದ ನಂತರ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರೆಯಿತು. ಹೀಗಿರುವಾಗ ಉತ್ಸವ ಎಂಬ ಪದ ಬಳಸಿದರೆ ಹೋರಾಟದ ಚಿತ್ರಣ ಸಿಗುತ್ತದೆಯೇ? ಎಂದವರು ಕೇಳಿದರು. ಹೈದರಾಬಾದ್ ಸಂಸ್ಥಾನ ಭಾರತದಲ್ಲಿ ವಿಲೀನವಾಗದೇ ಹೋಗಿ ದ್ದರೆ ದಕ್ಷಿಣ ಪಾಕಿಸ್ತಾನ ಸೃಷ್ಟಿಯಾಗು ತ್ತಿತ್ತು. ಆಗ ಕರ್ನಾಟಕದ ಏಕೀಕರಣವೂ ಸಾಧ್ಯವಾಗುತ್ತಿರಲಿಲ್ಲ. ಇಂತಹ ದೊಡ್ಡ ಹೋರಾಟದ ಬಗ್ಗೆ ರಾಜ್ಯ ಸರ್ಕಾರ ಇದುವರೆಗೂ ಅಧಿಕೃತ ದಾಖಲೆ ಪುಸ್ತಕ ಪ್ರಕಟಿಸಿಲ್ಲ. ರಾಜ್ಯದಲ್ಲಿ ಎಷ್ಟೆಲ್ಲಾ ವಿಶ್ವವಿದ್ಯಾನಿಲಯಗಳು ಹಾಗೂ ಕನ್ನಡ ಸಂಘಟನೆಗಳಿದ್ದರೂ ಈ ಕೆಲಸ ಆಗಿಲ್ಲ ಎಂದವರು ವಿಷಾದಿಸಿದರು.

ಶತಮಾನದ ಹಿಂದೆ ಉತ್ತರ ಕರ್ನಾಟಕದಲ್ಲಿ ಕಲಿಯಲು ಉರ್ದು, ವ್ಯವಹಾರಕ್ಕೆ ಮರಾಠಿ ಎಂಬ ಪರಿಸ್ಥಿತಿ ಇತ್ತು. ಆಗ ತಮ್ಮ ತಾತ ಕಲ್ಲಿನಾಥ ಪುರಾಣಿಕ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ 163 ಕನ್ನಡ ಶಾಲೆಗಳನ್ನು ತೆರೆದಿದ್ದರು. ನೂರಾರು ನಾಟಕ ಹಾಗೂ ಹಾಡುಗಳ ಮೂಲಕ ಕನ್ನಡವನ್ನು ಬೆಳೆಸಿದರು. ತಂದೆ ಅನ್ನದಾನಯ್ಯ ಪುರಾಣಿಕ ಅವರು ಸ್ವಾತಂತ್ರ್ಯ ಹೋರಾಟ, ವಿಮೋಚನಾ ಹೋರಾಟ ಹಾಗೂ ಕನ್ನಡ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಿದ ಉದಯಶಂಕರ, ತಮ್ಮ ಕುಟುಂಬದ ಆರು ಪೀಳಿಗೆಗಳು ಕಳೆದ 207 ವರ್ಷಗಳಿಂದ ಕನ್ನಡ ಸೇವೆಯಲ್ಲಿ ನಿರತವಾಗಿರುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಸಂಗಮೇಶಗೌಡ್ರು, ಮುಂದಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಯೋಜಿಸಲು ಯೋಜಿಸುತ್ತಿರುವುದಾಗಿ ತಿಳಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಗನೂರು ಬಸಪ್ಪನವರು ಕಾಯಕ, ದಾಸೋಹ ಹಾಗೂ ಇಷ್ಟಲಿಂಗ ಪೂಜೆಯ ಸಾಕಾರಮೂರ್ತಿಯಾಗಿದ್ದರು ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ರಾಜ್ಯ ಸಹಕಾರ ಮಂಡಲದ ನಿರ್ದೇಶಕ ಶೇಖರಗೌಡ ಮಾಲಿ ಪಾಟೀಲ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಬಿ. ದಿಳ್ಯಪ್ಪ, ಸುನಂದಾ ದೇವಿ ಉಪಸ್ಥಿತರಿದ್ದರು.

error: Content is protected !!