ಜಯ ಮೃತ್ಯುಂಜಯ ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ತೆರಳಿದ ವಚನಾನಂದ ಶ್ರೀ
ಮುಖ್ಯಮಂತ್ರಿಗಳ ಪ್ರತಿಕೃತಿ ದಹನ, ಮೀಸಲಾತಿಗೆ ಎರಡೂ ಪೀಠಾಧಿಪತಿಗಳ ಆಗ್ರಹ
ದಾವಣಗೆರೆ, ಜ.30- ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಹಾಗೂ ಲಿಂಗಾಯತ ಎಲ್ಲಾ ಒಳ ಪಂಗಡಗಳನ್ನು ಕೇಂದ್ರ ಸರ್ಕಾರ ಒಬಿಸಿಗೆ ಸೇರಿಸಬೇಕೆಂದು ಒತ್ತಾಯಿಸಿ ಪಂಚಮಸಾಲಿ ಸಮಾಜದ ಜಗದ್ಗುರುಗಳ ಪಾದಯಾತ್ರೆಗೆ ಶನಿವಾರ ಮುಂಜಾನೆ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಬೀಳ್ಕೊಡಲಾಯಿತು.
ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಕೂಡಲ ಸಂಗಮದಿಂದ ಬೆಂಗಳೂರಿಗೆ ನಡೆಸುತ್ತಿರುವ ಪಾದಯಾತ್ರೆಯನ್ನು ಬೆಂಬಲಿಸಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಗಳೂ ಸಹ ಪಾದಯಾತ್ರೆಯಲ್ಲಿ ಪಾಲ್ಗೊಂಡು ತೆರಳಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಾರುಕೋಲು ಚಳವಳಿಗೆ ಚಾಲನೆ ನೀಡಿದ ಶ್ರೀಗಳು, ಕೂಡಲೇ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಶ್ರೀಗಳು ಸಹ ಪಾದಯಾತ್ರೆಯಲ್ಲಿ ಪಾಲ್ಗೊಂಡರೆ ಹಕ್ಕೊತ್ತಾಯಕ್ಕೆ ಬಲ ಬರುತ್ತದೆ ಎಂಬುದು ಜನರ ಬಯಕೆಯಾಗಿತ್ತು. ಅದು ಇಂದು ಈಡೇರಿದೆ.
ನನ್ನ ಜನ್ಮಭೂಮಿಯಲ್ಲಿಯೇ ಸಮಾಜದಲ್ಲಿ ಗೊಂದಲ ಆರಂಭವಾಗಿತ್ತು. ಯೋಗಾಯೋಗ ಎಂಬಂತೆ ಅದೇ ಸ್ಥಳದಲ್ಲಿ ಎರಡೂ ಪೀಠಗಳ ಶ್ರೀಗಳು ಒಂದಾಗಿರುವುದು ಖುಷಿಯಾಗಿದೆ. ಇದು ಭಗವಂತನ ಕೃಪೆ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ನಾವು ಇಡುವ ಪ್ರತಿ ಹೆಜ್ಜೆಗಳೂ ಪ್ರಾಮಾಣಿಕ ಹೆಜ್ಜೆಗಳು. ಕಳೆದ 26 ವರ್ಷಗಳಿಂದಲೂ ಸಮಾಜದಲ್ಲಿ ಸಂಘಟನೆ ಇದೆ. ಆದರೆ ಇಷ್ಟೊಂದು ಹುರುಪು, ಉತ್ಸಾಹ ಕಂಡಿರಲಿಲ್ಲ. ಜನತೆ ಸ್ವಯಂ ಸ್ಫೂರ್ತಿಯಿಂದ ಒಗ್ಗಟ್ಟಾಗಿದೆ. ಇದನ್ನು ಮನಗಂಡಾದರೂ ಸರ್ಕಾರ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಹೇಳಿದರು.
ಇಲ್ಲಿಯವರೆಗೆ ಪಾದಯಾತ್ರೆ ಶಾಂತಿಯುತವಾಗಿತ್ತು. ಕ್ರಾಂತಿ ರೂಪದ ಸಂಕೇತವಾಗಿ ಬಾರುಕೋಲು ಬೀಸುತ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಹೂವಿನ ಹಾರ, ಶಾಲು ಹಾಕಿ ಗೌರವಿಸುತ್ತಿದ್ದ ಕೈಗಳು ಇಂದು ಪ್ರತಿಕೃತಿ ದಹನ ಮಾಡಿವೆ. ಇದು ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಕೂಡಲ ಸಂಗಮ ಶ್ರೀಗಳ ಹೆಗಲಿಗೆ ಹೆಗಲು ಕೊಟ್ಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದೇನೆ. 3ಬಿ ಮೀಸಲಾತಿ ನೀಡಿದ ಯಡಿಯೂರಪ್ಪನವರು, 2ಎ ಮೀಸಲಾತಿಯನ್ನೂ ಕೊಡುವ ವಿಶ್ವಾಸವಿದೆ .
– ಶ್ರೀ ವಚನಾನಂದ ಸ್ವಾಮೀಜಿ
ರಾಜ್ಯದ ಇತಿಹಾಸದಲ್ಲಿಯೇ ಲಿಂಗಾಯತ ಮುಖ್ಯಮಂತ್ರಿಗಳ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರೆ, ಸಮಾಜ ಎಷ್ಟರ ಮಟ್ಟಿಗೆ ನಿಮ್ಮ ಮೇಲೆ ವಿಶ್ವಾಸ ಇಟ್ಟಿತ್ತು ಎಂಬುದನ್ನು ಮುಖ್ಯಮಂತ್ರಿಗಳು ಅರ್ಥ ಮಾಡಕೊಳ್ಳಬೇಕು. ಕೂಡಲೇ ಮೀಸಲಾತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು.
– ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಪಂಚಮಸಾಲಿಗರು ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ. ನಂಬಿದರೆ ಪ್ರಾಣ ಕೊಡುತ್ತೇವೆ. ನಂಬಿಕೆಗೆ ದ್ರೋಹವಾದರೆ ಎಲ್ಲಾ ಶಾಸಕರೂ ಒಗ್ಗಟ್ಟಾಗಿ ಸರ್ಕಾರವನ್ನು ಒತ್ತಾಯಿಸಬೇಕು. ಬಸವರಾಜ ಪಾಟೀಲ ಯತ್ನಾಳ್ ಸರ್ಕಾರದ ವಿರುದ್ಧವಾಗಿ ಗುಡುಗುವುದಾಗಿ ಹೇಳಿದ್ದಾರೆ. ಅವರ ಗುಡುಗಿಗೆ ಎಲ್ಲರೂ ಬೆಂಬಲ ನೀಡಬೇಕು. ಒಳಗೊಂದು ಹೊರಗೊಂದು ಮಾಡಬಾರದು ಎಂದರು.
ನೀವು ಶಾಸಕರಾಗಲು ಎಲ್ಲಾ ಜನರ ಬೆಂಬಲ ಇರಬಹುದು. ಆದರೆ ಚುನಾವಣೆಗೆ ಸ್ಪರ್ಧಿಸುವಾಗ ಟಿಕೆಟ್ ಪಡೆದಿರುವುದು ಪಂಚಮಸಾಲಿ ಸಮಾಜದವರು ಎಂದು. ಹೀಗಾಗಿ ಅಧಿವೇಶನದಲ್ಲಿ ಎಲ್ಲಾ ಶಾಸಕರೂ ದನಿ ಎತ್ತಬೇಕು. ಆ ಮೂಲಕ ಸಮಾಜದ ಋಣ ತೀರಿಸಲು ಮುಂದಾಗಬೇಕು ಎಂದರು.
ಪಾದಯಾತ್ರೆ 369 ಕಿ.ಮೀ. ಕ್ರಮಿಸಿದೆ. ಇಲ್ಲಿಂದ ಆನಗೋಡು ನಂತರ ಚಿತ್ರದುರ್ಗ ಪ್ರವೇಶಿಸಲಿದೆ. ಅಲ್ಲಿಯೂ ಹೋರಾಟಕ್ಕೆ ಸನ್ನದ್ಧರಾಗಿದ್ದೇವೆ. ಸರ್ಕಾರ ಉಗ್ರ ವಾತಾವರಣಕ್ಕೆ ಅವಕಾಶ ಮಾಡಿಕೊಡದೇ ಹಕ್ಕೊತ್ತಾಯಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡುತ್ತಾ, ಆಂತರಿಕವಾಗಿ ಎರಡೂ ಪೀಠದ ಶ್ರೀಗಳು ಒಂದಾಗಿಯೇ ಇದ್ದೆವು. ಸಮುದಾಯದ ಹಕ್ಕಿಗಾಗಿ ಮತ್ತೆ ಇಬ್ಬರೂ ಪಾದಯಾತ್ರೆಯಲ್ಲಿ ಒಂದಾಗಿದ್ದೇವೆ. ಮುಂದೆಯೂ ಒಂದಾಗಿಯೇ ಇರುತ್ತೇವೆ ಎಂದು ಹೇಳಿದರು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ರೈತಾಪಿ ವರ್ಗವನ್ನು ಮೇಲೆತ್ತಲು ಪಾದಯಾತ್ರೆ ಆರಂಭವಾಗಿದೆ. ಕೂಡಲ ಸಂಗಮ ಶ್ರೀಗಳ ಹೆಗಲಿಗೆ ಹೆಗಲು ಕೊಟ್ಟು ಭಾಗವಹಿಸಿದ್ದೇನೆ. ನಾವಿಬ್ಬರೂ ಚನ್ನಮ್ಮನ ಇಬ್ಬರು ಮಕ್ಕಳು. ಸಮಾಜದ ಎರಡು ಕಣ್ಣುಗಳು. ಚನ್ನಮ್ಮನ ಕನಸು ಇಂದು ನನಸಾಗಿದೆ. ಇದು ಚನ್ನಮ್ಮನ ವಿಜಯೋತ್ಸವ ಎಂದು ಬಣ್ಣಿಸಿದರು.
2ಎ ಮೀಸಲಾತಿ ಪಡೆಯುವುದು ನಮ್ಮ ಹಕ್ಕು. ಕೇಂದ್ರದಲ್ಲಿ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರ ಒಬಿಸಿ ಗೆ ಸೇರಿಸುವಂತೆಯೂ ಹೋರಾಟ ನಡೆಯುತ್ತಿದೆ. ಕಾರಣ ಎಲ್ಲಾ ಲಿಂಗಾಯತ ಒಳ ಪಂಗಡಗಳು ಪ್ರತಿಭಟನೆಗೆ ಬೆಂಬಲಿಸಬೇಕು ಎಂದರು.
ಇಬ್ಬರೂ ಶ್ರೀಗಳ ಆಗ್ರಹಕ್ಕೆ ಸರ್ಕಾರ ಮಣಿಯುವುದೇ? ಎಂಬ ಪ್ರಶ್ನೆಗೆ, ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ಹೋರಾಟದ ಮೂಲಕ ಹಕ್ಕು ಪಡೆಯುತ್ತೇವೆ. ಸಮಾಜ ಗೆಲ್ಲಬೇಕು, ವ್ಯಕ್ತಿಯಲ್ಲ ಸಮಾಜದ ಶಕ್ತಿ ದೊಡ್ಡದು. 3ಬಿ ಮೀಸಲಾತಿ ನೀಡಿದ ಯಡಿಯೂರಪ್ಪನವರು, 2ಎ ಮೀಸಲಾತಿಯನ್ನೂ ಕೊಡುವ ವಿಶ್ವಾಸವಿದೆ ಎಂದು ವಚನಾನಂದ ಶ್ರೀಗಳು ಪ್ರತಿಕ್ರಿಯಿಸಿದರು.
ಶ್ರೀ ವಚನಾನಂದ ಶ್ರೀಗಳು ಕೂಡಲ ಸಂಗಮ ಶ್ರೀಗಳ ಪಾದಯಾತ್ರೆಯಿಂದ ದೂರು ಉಳಿದಿದ್ದರು. ಆದರೆ, ಪಾದಯಾತ್ರೆಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಪಾದಯಾತ್ರೆ ಹರಪನಹಳ್ಳಿಗೆ ಆಗಮಿಸಿದಾಗ ವಚನಾನಂದ ಶ್ರೀಗಳು ತೆರಳಿ ಪಾದಯಾತ್ರೆ ಸ್ವಾಗತಿಸಿ, ಬೆಂಬಲಿಸುವುದಾಗಿ ಬಹಿರಂಗವಾಗಿಯೇ ಹೇಳಿದ್ದರು. ಇಬ್ಬರೂ ಶ್ರೀಗಳನ್ನು ವೇದಿಕೆ ಮೇಲೆ ಕಾಣುವ ಭಾಗ್ಯ ಪಂಚಮಸಾಲಿಗರದ್ದಾಗಿತ್ತು.
ಆದರೆ ಹರಿಹರದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಅಂಗವಾಗಿ ನಡೆಸಿದ ಸಮಾವೇಶದಲ್ಲಿ ವಚನಾನಂದ ಶ್ರೀಗಳು ಕಾಣಿಸಿಕೊಂಡಿರಲಿಲ್ಲ. ಅವರು ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದ್ದರು.
ಇದಾದ ನಂತರ ದಾವಣಗೆರೆಯಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಮತ್ತೆ ಎರಡೂ ಪೀಠಗಳು ಶ್ರೀಗಳು ಒಂದಾಗಿದ್ದರು. ಭಕ್ತರ ಒತ್ತಾಯಕ್ಕೆ ಮಣಿದ ವಚನಾನಂದ ಶ್ರೀಗಳು, ಪಾದಯಾತ್ರೆಯಲ್ಲಿ ತಾವೂ ತೆರಳುವುದಾಗಿ ಘೋಷಿಸಿದರು. ಅಂತೆಯೇ ಶನಿವಾರ ಎರಡೂ ಪೀಠಗಳ ಜಗದ್ಗುರುಗಳು ಒಂದಾಗಿ ಹೆಜ್ಜೆ ಹಾಕಿದರು. ಇದೀಗ ಪಂಚಮಸಾಲಿ ಸಮಾಜಕ್ಕೆ ಮತ್ತಷ್ಟು ಪುಷ್ಟಿ ಬಂದಂತಾಗಿದೆ.
ಹೋರಾಟ ಸಮಿತಿಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಮಾಜದ ಮುಖಂಡ ಬಿ.ಸಿ. ಉಮಾಪತಿ, ಪಾದಯಾತ್ರೆ ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಚ್.ಎಸ್. ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.