ಜಗಳೂರು, ಜ.30- ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗಿಸಲು ನಾವೆಲ್ಲರೂ ಶ್ರಮಿಸೋಣ. ಅವರ ಕನಸಿನ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸರ್ವರೂ ಪ್ರತಿಜ್ಞೆ ಮಾಡೋಣ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಭು ಎನ್. ಬಡಿಗೇರ್ ಕರೆ ನೀಡಿದರು.
ಪಟ್ಟಣದ ತಾಲ್ಲೂಕು ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯ್ತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯ, ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಕಾಂ ಪೋಸ್ಟ್ ತೊಟ್ಟಿ ಉದ್ಘಾಟನಾ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಕ್ಕಾಗಿ ಅವಿರತ ಶಾಂತಿಯುತ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟು ಹುತಾತ್ಮರಾದ ಮಹಾತ್ಮ ಗಾಂಧೀಜಿ ಯವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ. ಜನವರಿ 30 ಮಹಾತ್ಮರ ಹುತಾತ್ಮ ದಿನವಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇಶದ ಉದ್ಧಾರಕ್ಕಾಗಿ ಅವರು ಮತ್ತೆ ಹುಟ್ಟಿಬರಲಿ ಎಂದು ಆಶಿಸಿದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್ ಮಾತನಾಡಿ, ಪೌರ ಕಾರ್ಮಿಕರು ಬೀದಿಗಳಲ್ಲಿ ವೈಯಕ್ತಿಕ ಆರೋಗ್ಯ ಲೆಕ್ಕಿಸದೆ ಪ್ರತಿನಿತ್ಯ ಸ್ವಚ್ಛತೆ ಮಾಡುತ್ತಿರುವುದು ಪ್ರಶಂಸನೀಯ ಕಾರ್ಯ ಎಂದರು.
ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ, ವಕೀಲರ ಸಂಘದ ಅಧ್ಯಕ್ಷ ಬಸವರಾಜಪ್ಪ, ವಕೀಲರ ಸಂಘದ ಪದಾಧಿಕಾರಿಗಳಾದ ತಿಪ್ಪೇ ಸ್ವಾಮಿ, ವಿ. ರುದ್ರೇಶ್, ಕೃಷ್ಣಗೌಡ ಪಾಟೀಲ್, ಸಣ್ಣೋಬಯ್ಯ, ಮಹಾಂತೇಶ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.