ಮಲೇಬೆನ್ನೂರು, ಏ.4 – ಗ್ರಾ.ಪಂ ನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಮಲೇಬೆನ್ನೂರು ಪುರಸಭೆ ಅಭಿವೃದ್ದಿ ಕಾರ್ಯಗಳಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ, ಸಾಧನೆ ಶೂನ್ಯವಾಗಿದೆ. ಇದಕ್ಕೆ ಯಾರು ಜವಾಬ್ದಾರರು? ಎಂದು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಶ್ರೀಮತಿ ನಜ್ಮಾ ಪ್ರಶ್ನಿಸಿದರು.
ಅವರು ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸ್ವಚ್ಛತೆ, ಶುದ್ದ ಕುಡಿಯುವ ನೀರು, ವಿದ್ಯುತ್ ಸಂಪರ್ಕವನ್ನು ಪುರಸಭೆಯಿಂದ ಜನರು ಬಯಸುತ್ತಾರೆ, ಅವುಗಳನ್ನು ಸರಿಯಾಗಿ ಒದಗಿಸಿದಲ್ಲಿ ಮಾತ್ರ ಜನರಿಂದ ನಿಮಗೆ ಗೌರವ ಸಿಗುತ್ತದೆ. ಆದರೆ ನೀವು ಅದನ್ನೇ ಸರಿಯಾಗಿ ನಿರ್ವಹಿಸಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಮಲೇಬೆನ್ನೂರು ಪುರಸಭೆ ಎಂದರೆ ಸಮಸ್ಯೆಗಳ ಲೇಬಲ್ ಹಾಕಿದ್ದಾರೆ. ಚನ್ನಗಿರಿ ಯಲ್ಲಿ 5, ಜಗಳೂರಿನಲ್ಲಿ 6 ಮತ್ತು ಹೊನ್ನಾ ಳಿಯಲ್ಲಿ 4 ಸಿಬ್ಬಂದಿಗಳು ಮಾತ್ರ ಇದ್ದರೂ ನೂರಕ್ಕೆ ನೂರು ಸುಧಾರಣೆಯಾಗಿದೆ.
ಇಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದರು.
ಜಿಲ್ಲಾಧಿಕಾರಿಗಳ ಕೆಲಸದ ವೇಗಕ್ಕೆ ತಕ್ಕಂತೆ ನಾವೂ ಕಾರ್ಯ ನಿರ್ವಹಿಸುತ್ತಿದ್ದೇವೆ. ಪಟ್ಟಣದ ಅಭಿವೃದ್ದಿಗೆ ಕ್ರಿಯಾ ಯೋಜನೆ ಕಳುಹಿಸಿದರೆ ಒಂದೇ ದಿನದಲ್ಲಿ ಅನುಮೋದನೆ ಮಾಡಿಸಿ ಕಳುಹಿಸುತ್ತೇವೆ. ಎಲ್ಲಾ ಸ್ಕೀಂಗಳಲ್ಲೂ ಸಾಕಷ್ಟು ಅನುದಾನ ಇದ್ದರೂ ಅದನ್ನು ಸರಿಯಾಗಿ ಉಪಯೋಗಿಸಿ ಕೊಳ್ಳುತ್ತಿಲ್ಲ.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಲೇಬೆನ್ನೂರು ಬಗ್ಗೆ ಕೇಳಿದಾಗ ಎಲ್ಲಾ ವಿಭಾಗಗಳಲ್ಲೂ ಸಾಧನೆ ಶೂನ್ಯ ಎಂದು ಹೇಳಲು ನನಗೆ ನಾಚಿಕೆ ಆಗುತ್ತದೆ ಎಂದು ನಜ್ಮಾ ಅವರು ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆ ಸದಸ್ಯ ಬಿ. ಸುರೇಶ್ ಮಾತನಾಡಿ, ನಮ್ಮ ಪುರಸಭೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಯಾರೂ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಸದಸ್ಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು. ಘನತ್ಯಾಜ್ಯ ಹಾಕುತ್ತಿರುವ ಜಮೀನಿನ ಸುತ್ತಲೂ ತಗಡಿನ ಬ್ಯಾರಿಕೇಡ್ ನಿರ್ಮಿಸಿಕೊಡುವಂತೆ ಕೇಳಿದರು.
ಬಾಪೂಜಿ ಹಾಲ್ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮರಾ ಮತ್ತು ಹೈಮಾಸ್ಟ್ ದೀಪ ಅಳವಡಿಸುವಂತೆ ಒಂದು ವರ್ಷದಿಂದ ಜನ ಕೇಳುತ್ತಿದ್ದಾರೆ. ಇದಕ್ಕೆ ಯಾಕೆ ಪ್ರಸ್ತಾವನೆ ಕಳುಹಿಸಿಲ್ಲ, 14ನೇ ಹಣಕಾಸಿನ ಯೋಜನೆಯಲ್ಲಿ 57.31 ಲಕ್ಷ ರೂ ಉಳಿತಾಯವಾಗಿದ್ದು, ಅದನ್ನು ಏನು ಮಾಡಿದ್ದೀರಿ? ಎಂದು ನಜ್ಮಾ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಈಗ ಅನುಮೋದನೆಯಾಗಿರುವ ಕಾಮ ಗಾರಿಗಳಿಗೆ ಅಲ್ಪಾವಧಿ ಟೆಂಡರ್ ಕರೆಯಿರಿ. ಒಂದು ವಾರದೊಳಗೆ ಯಾವ ಖಾತೆಯಲ್ಲಿ ಉಳಿತಾಯ ಹಣವಿದೆ, ಯಾವ ಟೆಂಡರ್ ಕಾಲ್ ಮಾಡಬೇಕಿದೆ, ಯಾವ ಕೆಲಸ ಆಗಿಲ್ಲ ಎಂಬುದನ್ನು ಮುಖ್ಯಾಧಿಕಾರಿ ಹಾಗು ಅಧ್ಯಕ್ಷರ ಗಮನಕ್ಕೆ ತರಬೇಕು. ಅದನ್ನು ತುರ್ತು ಸಭೆಯಲ್ಲಿಟ್ಟು ನಮ್ಮ ಗಮನಕ್ಕೆ ತರಬೇಕೆಂದು ಇಂಜಿನಿಯರ್ ಮನೋಜ್ ಅವರಿಗೆ ನಜ್ಮಾ ತಾಕೀತು ಮಾಡಿದರು.
ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪುರಿ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ದಾದಾವಲಿ ಯುಸೂಫ್, ಎಇಇ ಪ್ರಸನ್ನ, ನೋಡಲ್ ಅಧಿಕಾರಿ ಪ್ರಶಾಂತ್, ಪ್ರಭಾರ ಮುಖ್ಯಾಧಿಕಾರಿ ದಿನಕರ್, ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನವೀನ್, ಇಮ್ರಾನ್ ಮತ್ತಿತರರು ಸಭೆಯಲ್ಲಿದ್ದರು.