ಬಾಗಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗದ್ದಕ್ಕೆ ಅಧಿಕಾರಿಗಳಿಗೆ ಧಿಕ್ಕಾರ
ಹರಪನಹಳ್ಳಿ, ಜ. 29- ಅವಧಿ ಮುಗಿಯುತ್ತಾ ಬಂದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಹೇಳಿ ಹೇಳಿ ಸಾಕಾಯಿತು ಎಂದು ತಾ.ಪಂ ಸದಸ್ಯೆಯೊಬ್ಬರು ಕಣ್ಣೀರು ಹಾಕಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ ಘಟನೆ ಸಾಮಾನ್ಯ ಸಭೆಯಲ್ಲಿ ಜರುಗಿತು.
ಬಾಗಳಿ ಕ್ಷೇತ್ರದ ಸದಸ್ಯೆ ಲತಾ ಬಸವರಾಜ ಅವರು ಬಾಗಳಿ ಗ್ರಾಮದಲ್ಲಿ ಅರ್ಧ ಊರಿಗೆ ನೀರು ಬರುತ್ತದೆ. ಇನ್ನರ್ಧ ಊರಿಗೆ ನೀರು ಬರುತ್ತಿಲ್ಲ. ಅರ್ಧ ಊರಿಗೆ ಬರುತ್ತಿರುವ ನೀರಿನಲ್ಲೂ ಕಸ, ಕಡ್ಡಿ, ಜಂಡು, ಪಾಚಿ ಬರುತ್ತದೆ. ಇಂತಹ ನೀರು ಕುಡಿದರೆ ಜನರ ಆರೋಗ್ಯ ಏನಾಗುತ್ತದೆ ? ಎಂದು ಪ್ರಶ್ನಿಸಿದರು.
ದುಃಖದಿಂದ ಸುರಿಯತ್ತಿರುವ ಕಣ್ಣೀರನ್ನು ಒರೆಯಿಸಿಕೊಳ್ಳುತ್ತಲೇ ಮಾತ ನಾಡಿದ ಅವರು, ಇನ್ನು ಮೂರು ತಿಂಗಳಿಗೆ ನಮ್ಮ ಅವಧಿ ಮುಗಿಯುತ್ತದೆ. ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಅಧಿಕಾರಿಗಳಿಗೆ ಪ್ರತಿ ಸಭೆಯಲ್ಲೂ ಹೇಳಿ ಹೇಳಿ ಸಾಕಾಗಿ ಹೋಯಿತು. ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಈ ಮಹಿಳಾ ಸದಸ್ಯೆಯ ಬೆಂಬಲಕ್ಕೆ ಸದಸ್ಯರಾದ ಮೈದೂರು ರಾಮಣ್ಣ, ಈರಣ್ಣ, ಪ್ರಕಾಶ ಧಾವಿಸಿ ಸಂಬಂಧ ಪಟ್ಟ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.
ಆಗ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿದ್ದರಾಜು ಅವರು ಗ್ರಾಮಕ್ಕೆ ಭೇಟಿ ನೀಡಿ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು. ಇಂಜಿನಿಯರ ಉತ್ತರಕ್ಕೆ ಸಮಾಧಾನ ಗೊಳ್ಳದ ಲತಾ ಅವರು ಬರೀ ಇದೇ ಉತ್ತರ ನೀಡುತ್ತೀರಿ ಎಂದು ಪ್ರತಿಭಟಿಸಿದರು.
ಹರಪನಹಳ್ಳಿ ತಾಲ್ಲೂಕು ಫ್ಲೋರೈಡ್ ಮುಕ್ತ ಎಂದು ಸರ್ಕಾರ ಘೋಷಣೆ ಮಾಡಿದೆ. ಆದ್ದರಿಂದ ಹೊಸ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಇಲ್ಲ ಎಂದು ಎಇಇ ಸಿದ್ದರಾಜು ಸಭೆಯಲ್ಲಿ ತಿಳಿಸಿದಾಗ ಆಶ್ಚರ್ಯ ಚಿಕಿತರಾದ ಸದಸ್ಯ ಹುಣ್ಸಿಹಳ್ಳಿ ಪ್ರಕಾಶ್, ಮೈದೂರು ರಾಮಣ್ಣ ಅವರುಗಳು ಇನ್ನೂ ಫ್ಲೋರೈಡ್ ಮುಕ್ತವಾಗಿಲ್ಲ. ಕಡಬಗೇರಿ ಸೇರಿದಂತೆ ವಿವಿಧೆಡೆ ಶುದ್ದ ಕುಡಿಯುವ ನೀರಿನ ಘಟಕ ಅವಶ್ಯಕತೆ ಇದೆ ಎಂದು ವಾದಿಸಿದರು.
ತಾಲ್ಲೂಕಿನಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಿ ಎಂದು ಉಪಾಧ್ಯಕ್ಷ ಎಲ್. ಮಂಜಾನಾಯ್ಕ ಹಾಗೂ ಲತಾ ಒತ್ತಾಯಿಸಿದಾಗ ತಹಶೀಲ್ದಾರ್ ಎಲ್.ಎಂ. ನಂದೀಶ ಅವರು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸುತ್ತೇನೆ ಎಂದು ತಿಳಿಸಿದರು.
ಯಾವ ಗ್ರಾಮಗಳಲ್ಲಿ ಸ್ಮಶಾನದ ಜಾಗವಿಲ್ಲವೋ ಅಲ್ಲಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡುವುದಾಗಿ ತಿಳಿಸಿದರು. ಕಂಚಿಕೇರಿಯಲ್ಲಿ ಗ್ರಾಮ ಲೆಕ್ಕಿಗ ಕೇಂದ್ರ ಸ್ಥಾನದಲ್ಲಿರದೆ ಕರ್ತವ್ಯ ನಿರ್ಲಕ್ಷ್ಯ ಮಾಡುತ್ತಿದ್ದಾನೆ ಕ್ರಮ ಕೈಗೊಳ್ಳಿ ಎಂದು ಈರಣ್ಣ ಒತ್ತಾಯಿಸಿದರು.
ಮತದಾರರ ಪಟ್ಟಿಯನ್ನು ಕ್ರಮಬದ್ಧವಾಗಿ ಸರಿಪಡಿಸಿ ಎಂದು ಚಿಗಟೇರಿ ಬಸವನಗೌಡ ಅವರು ಒತ್ತಾಯಿಸಿದರು ತಾ.ಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಮಂಜನಾಯ್ಕ, ಇಓ ಈಶ್ವರಪ್ರಸಾದ್, ಯೋಜನಾಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು.