ಹರಿಹರ : ನಗರದ ಹೊರ ವಲಯ ಬೆಳ್ಳೂಡಿ ಸಮೀಪದ ಕಾಗಿನಲೆ ಕನಕ ಗುರುಪೀಠದ ಶಾಖಾಮಠ ದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುವ ಶ್ರೀಮಠದ 5ನೇ ವಾರ್ಷಿಕೋತ್ಸವ, ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಮಹಾಕುಂಭಾಭಿ ಷೇಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗುರುಪೀಠದ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸಾವಿರಾರು ಆಸನಗಳ ವ್ಯವಸ್ಥೆ ಮಾಡಲಾಗಿದೆ. ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀ, ಸಿಎಂ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಭೈರತಿ ಬಸವರಾಜ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಸಂಸದ ಜಿ.ಎಂ.ಸಿದ್ದೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾವಹಿಸಲಿದ್ದಾರೆ.
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ನೇತ್ವತ್ವ ವಹಿಸಲಿದ್ದಾರೆ. ಮಠದ ಆವರಣದಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯಾರ್ಥಿ ನಿಲಯ, 45 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿರುವ ಬೀರದೇವರ ದೇವಸ್ಥಾನ ಮತ್ತು ಮುಖ್ಯ ದ್ವಾರ ಲೋಕಾರ್ಪಣೆ ಮಾಡಲಾಗುತ್ತಿದೆ. ಜೊತೆಗೆ ದಾರ್ಶನಿಕರ ಪ್ರತಿಮೆಗಳ ಅನಾವರಣ ನಡೆಯಲಿದೆ.
ಇಂದು ರಾತ್ರಿ 9ಕ್ಕೆ ರಾಜಣ್ಣ ಜೇವರ್ಗಿ ವಿರಚಿತ `ಕುಂಟ ಕೋಣ, ಮೂಕ ಜಾಣ’ ಎಂಬ ನಾಟಕ ಹಾಗು ಏ.4ರ ರಾತ್ರಿ 9ಕ್ಕೆ ಕೆ.ಎನ್.ಸಾಳಂಕಿ ವಿರಚಿತ `ಕಿವುಡ ಮಾಡಿದ ಕಿತಾಪತಿ’ ಎಂಬ ಹಾಸ್ಯಭರಿತ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಕಳೆದ ವರ್ಷವೇ ನಡೆಯಬೇಕಿದ್ದ ಕಾರ್ಯಕ್ರಮ ವನ್ನು ಕೋವಿಡ್ ಕಾರಣ ಮುಂದೂಡಲಾಗಿತ್ತು. ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆಗಮಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಮಾಡಬೇಕೆಂದು ಆಯೋಜಕರು ಕೋರಿದ್ದಾರೆ.
ಇಂದಿನ ಕಾರ್ಯಕ್ರಮ: ಬೆಳಿಗ್ಗೆ 8ಕ್ಕೆ ಕನಕ ಗುರುಪೀಠದ ಕೆ.ಆರ್.ನಗರ ಶಾಖಾ ಮಠದ ಶಿವಾನಂದಪುರಿ ಶ್ರೀಗಳಿಂದ ಧ್ವಜಾರೋಹಣ. 10ಕ್ಕೆ ಹರಿಹರ, ಹೊನ್ನಾಳಿ, ಹೊಸದುರ್ಗ, ರಾಣೇಬೆನ್ನೂರು ಮತ್ತಿತರೆ ತಾಲ್ಲೂಕುಗಳಿಂದ ಆಗಮಿಸುವ ಬೀರದೇವರು ಗಳಿಗೆ ಸ್ವಾಗತ. 11ಕ್ಕೆ ಬೆಳ್ಳೂಡಿ ಗ್ರಾಮದ ಬೀರದೇವರ ಒಳಗುಡಿಯಿಂದ ಮಠದವರೆಗೆ ಮೆರವಣಿಗೆ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳಿಂದ ಚಾಲನೆ. ಮಧ್ಯಾಹ್ನ 2.30ಕ್ಕೆ ದಾರ್ಶನಿಕರ ಪ್ರತಿಮೆಗಳ ಅನಾವ ರಣ ಮತ್ತು ಎಸ್ಟಿ ಹೋರಾಟದ ಪಾದಯಾತ್ರಿಗಳಿಗೆ ಅಭಿನಂದನಾ ಸಮಾರಂಭ. ಸಂಜೆ 6-30ಕ್ಕೆ ಬೀರಲಿಂಗೇಶ್ವರ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ.
ನಾಳಿನ ಕಾರ್ಯಕ್ರಮ: ನಾಳೆ ದಿನಾಂಕ 4ರ ಬೆಳಿಗ್ಗೆ 11.30 ಕ್ಕೆ ಬಡ ವಿದ್ಯಾರ್ಥಿಗಳ ನಿಲಯ, ಮಹಾದ್ವಾರದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸುವರು. ಸರ್ಕಾರದ ವಿವಿಧ ಮಂತ್ರಿಗಳು, ಶಾಸಕರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ರಾಜ್ಯದ ವಿವಿಧ ಮಠಾಧೀಶರುಗಳ ಸಾನ್ನಿಧ್ಯದಲ್ಲಿ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.