ಹೊನ್ನಾಳಿ, ಏ.2- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶದ ಯುವಕರಲ್ಲಿ ಹೋರಾಟದ ಕಿಚ್ಚು ಹಚ್ಚಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟದ ಸೇನಾನಿಯಾಗಿದ್ದನು ಎಂದು ವಿಧಾನಸಭೆಯ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಇಂದು ಹಮ್ಮಿಕೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಿ ಸಮುದಾಯ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರ ಸಂಸ್ಥಾನದಲ್ಲಿ ಸೇನಾ ದಂಡನಾಯಕನಾಗಿದ್ದ ಸಂಗೊಳ್ಳಿ ರಾಯಣ್ಣ ಓರ್ವ ಅನನ್ಯ ದೇಶಭಕ್ತ, ಸ್ವಾತಂತ್ರ್ಯ ಪ್ರೇಮಿ, ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಅಪ್ರತಿಮ ಪರಾಕ್ರಮಿ. ಕಿತ್ತೂರು ಪ್ರಾಂತ್ಯದ ರಕ್ಷಣೆಗಾಗಿ ರಾಯಣ್ಣ ತನ್ನ ಪ್ರಾಣದ ಹಂಗು ತೊರೆದು ಹೋರಾಡಿದ ಸಂದರ್ಭವನ್ನು ವಿವರಿಸಿದರು.
ತಾವು ಸಿಎಂ ಆಗಿದ್ದ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳದ ಅಭಿವೃದ್ಧಿ ಪ್ರಾಧಿಕಾರ ರಚಿಸಿ, 272 ಕೋಟಿ ರೂ.ಗಳನ್ನು ಮೀಸಲಿರಿಸಿ ಆದೇಶ ಹೊರ ಡಿಸಿದ್ದೆ. ರಾಯಣ್ಣನ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆ, ಸೈನಿಕ ಶಾಲೆ ಸ್ಥಾಪನೆ, ಸಂಗೊಳ್ಳಿ ಗ್ರಾಮದ ಅಭಿವೃದ್ಧಿ, ರಾಯಣ್ಣನನ್ನು ಸೆರೆ ಹಿಡಿದ ಕೆರೆಗೆ ಕಾಯಕಲ್ಪ ನೀಡುವುದು, ನಂದಗಢ ಗ್ರಾಮದಲ್ಲಿ ಸಂಗೊಳ್ಳಿ ರಾಯ ಣ್ಣನನ್ನು ಗಲ್ಲಿಗೇರಿಸಿದ ಆಲದಮರದ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸುವುದು ಪ್ರಾಧಿಕಾರದ ಉದ್ದೇಶವಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಸರ್ಕಾರ ಆದ್ಯತೆ ನೀಡಲಿಲ್ಲ ಎಂದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಕನ್ನಡಿಗ. ರಾಯಣ್ಣ ಒಂದು ಸಮಾಜಕ್ಕೆ ಸೇರಿದವರಲ್ಲ. ಅವರು ದೇಶದ ಯುವಕರ ಆಶಾಕಿರಣ ಎಂದು ಬಣ್ಣಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮುಖಂಡ ದ್ಯಾವಪ್ಪ, ಉಪನ್ಯಾಸಕಿ ಸುಮತಿ ಜಯಪ್ಪ ಮತ್ತಿತರರು ಮಾತನಾಡಿದರು.
ಯಕ್ಕನಹಳ್ಳಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಬಿ. ಕರಿಬಸಪ್ಪ(ಶಂಭಣ್ಣ) ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಗಿನೆಲೆ ಕನಕ ಗುರುಪೀಠದ ಕೆ.ಆರ್. ನಗರ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಹದಡಿ ಚಂದ್ರಗಿರಿ ಮಠದ ಶ್ರೀ ಮುರಳೀಧರ ಸ್ವಾಮೀಜಿ, ಯಕ್ಕನಹಳ್ಳಿ ಗ್ರಾಮದ ಶ್ರೀ ಸಿದ್ಧಾರೂಢರ ಮಠದ ಅಧ್ಯಕ್ಷ ಬಿ. ಬಸವರಾಜಪ್ಪ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್. ರಾಮಪ್ಪ, ಆರ್. ಪ್ರಸನ್ನಕುಮಾರ್, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ಎಚ್.ಪಿ. ರಾಜೇಶ್, ಅಬ್ದುಲ್ ಜಬ್ಬಾರ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಡಿ. ಬಸವರಾಜ್, ಜಿ.ಪಂ. ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ತಾ.ಪಂ. ಸದಸ್ಯರಾದ ಎಚ್. ತಿಪ್ಪೇಶ್, ಅಂಬುಜಾಕ್ಷಿ ಮರುಳಸಿದ್ಧಪ್ಪ, ಯಕ್ಕನಹಳ್ಳಿ ಗ್ರಾ.ಪಂ. ಅಧ್ಯಕ್ಷ ವೈ.ಕೆ. ದಯಾನಂದ್, ಉಪಾಧ್ಯಕ್ಷೆ ರೇಣುಕಮ್ಮ ಹಾಗೂ ಸದಸ್ಯರು, ಮುಖಂಡರಾದ ಬಿ. ಸಿದ್ದಪ್ಪ, ಎಂ. ರಮೇಶ್, ಕೆ.ವಿ. ಚನ್ನಪ್ಪ, ಎಚ್.ಬಿ. ಶಿವಯೋಗಿ ಮತ್ತಿತರರು ಉಪಸ್ಥಿತರಿದ್ದರು.