ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಜಿ.ಕರುಣಾಕರ ರೆಡ್ಡಿ

ಹರಪನಹಳ್ಳಿ, ಏ.1 –  ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು  ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ  ತೆರಳಿ ಕೋವಿಡ್ ಕುರಿತು ಜಾಗೃತಿ ಮೂಡಿಸಿ, ಲಸಿಕೆ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ  ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳ ಜೊತೆಗೆ ಮಾತನಾಡಿ, ಕ್ರಮ ಕೈಗೊಳ್ಳಲು ಹೇಳಿದರು. ಬೇಸಿಗೆ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿ ಕೊಡಲು ಇಂದೇ ಸೂಚಿಸುತ್ತೇನೆ. ತಾಲ್ಲೂಕಿನ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಆರು ತಿಂಗಳು ನಂತರ ಉದ್ಘಾಟನೆ ನೆರವೇರಿಸಲಾಗುವುದು ಎಂದರು. 

ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ 8ನೇ ವಾರ್ಡ್‌  ಅಂಬೇಡ್ಕರ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಜನರಿಗೆ  ಲಸಿಕೆ ಹಾಕಲಾಗಿದೆ. ಜನರು ಭಯ ಬಿಟ್ಟು ಲಸಿಕೆ ಹಾಕಿಸಿಕೊಳ್ಳಿರಿ ಹಾಗೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ವೈದ್ಯರಾದ ಶಂಕರನಾಯ್ಕ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ,  ತಾಲ್ಲೂಕು ಬಿಜೆಪಿ  ಎಸ್.ಟಿ. ಘಟಕದ  ಅಧ್ಯಕ್ಷ  ಆರ್. ಲೋಕೇಶ್, ಪುರಸಭೆ ಸದಸ್ಯ ಎಂ.ಕೆ. ಜಾವೀದ್ ಮುಖಂಡರಾದ ಎಂ.ಪಿ. ನಾಯ್ಕ, ಯಡಿಹಳ್ಳಿ ಶೇಖರಪ್ಪ,  ಆರ್. ಕರೇಗೌಡ, ರಾಘವೇಂದ್ರ ಶೆಟ್ಟಿ, ಬಾಗಳಿ ಕೊಟ್ರೇಶಪ್ಪ, ಆಲೂರು ಶ್ರೀನಿವಾಸ್, ಸಿದ್ದಪ್ಪ ರೆಡ್ಡಿ, ಎಂ. ಸಂತೋಷ್, ಯು.ಪಿ. ನಾಗರಾಜ ಇನ್ನಿತರರಿದ್ದರು.

error: Content is protected !!