ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಬೀಳಗಿ ಕಿವಿಮಾತು
ದಾವಣಗೆರೆ, ಜ.25- ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಉತ್ತಮ ನಾಯಕನನ್ನು ಆರಿಸದ ಹೊರತು ಉತ್ತಮ ಆಡಳಿತ ನಿರೀಕ್ಷಿಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ನಗರ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರ ಪಾಲಿಕೆ ವತಿಯಿಂದ ಇಂದು ಹಮ್ಮಿಕೊಂಡಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾವು ಬದಲಾಗದೇ ಎದುರಿಗೆ ಇರುವವರು ಬದಲಾಗಬೇಕು ಎಂದು ನಿರೀಕ್ಷಿಸಲು ಬರುವುದಿಲ್ಲ. ಹಾಗಾಗಿ ಉತ್ತಮ ನಾಯಕನನ್ನು ಆರಿಸುವ ಕರ್ತವ್ಯ ಮೆರೆಯಬೇಕು ಎಂದು ಹೇಳಿದರು.
ದೇಶ, ರಾಜ್ಯಗಳನ್ನಾಳಲು ಸಮರ್ಥ ನಾಯಕರನ್ನು ಆರಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ತುಂಬಿದ ಪ್ರತಿ ವ್ಯಕ್ತಿಗೆ ಮತದಾನದ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಆದರೆ ಮತದಾನದ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದೆ ಎಂದು ವಿಷಾದಿಸಿದರು.
ಸುಶಿಕ್ಷಿತರು ಹೆಚ್ಚಿರುವ ನಗರ ಪ್ರದೇಶಗಳಲ್ಲೇ ಶೇ.50 ರಿಂದ 60 ಮತದಾನವಾಗುತ್ತಿದೆ. ಆದರೆ ಗ್ರಾ.ಪಂ ಚುನಾವಣೆಯಲ್ಲಿ ಶೇ. 85 ಮತದಾನವಾಗಿದ್ದನ್ನು ನೋಡಬಹುದು. ಕೇವಲ ಗುರುತಿನ ಚೀಟಿ ರೀತಿಯಲ್ಲಿ ಎಪಿಕ್ ಕಾರ್ಡ್ ಬಳಕೆಯಾಗಬಾರದು ಎಂದರು.
ಯುವಜನತೆಯನ್ನು ಬದಲಿಸಿದರೆ ಎಲ್ಲರನ್ನೂ ಬದಲಿಸಲು ಸಾಧ್ಯ. ಯುವಜನತೆ ತಾವು ಅರಿತರೆ ತಮ್ಮ ಸುತ್ತಲಿನ ಸಮಾಜದಲ್ಲಿ ಅರಿವು ಮೂಡಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಸ್ವೀಪ್ ಅಡಿಯಲ್ಲಿ ವಿನೂತನವಾದ ಮತ್ತು ಪರಿಣಾಮಕಾರಿಯಾದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾನ ಕುರಿತು ಅರಿವು ಮೂಡಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಲಿಂಗಾನುಪಾತ ಸುಧಾರಣೆಯಲ್ಲಿಯೂ ಸ್ವೀಪ್ ಪೂರಕ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಓ ಪದ್ಮಾ ಬಸವಂತಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಶಿಕ್ಷಿತರ ಮತದಾನ ಕಡಿಮೆ ಆಗುತ್ತಿದ್ದು, ಮತದಾನದ ದಿನವನ್ನು ರಜಾ ದಿನವೆಂದು ಪರಿಗಣಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ಮತದಾನ ಮಾಡುವುದು ನಮ್ಮ ಹಕ್ಕಿನ ಜೊತೆಗೆ ಪ್ರಜಾಸತ್ತಾತ್ಮಕ ಮೌಲ್ಯದ ಪಾಲನೆಯಾಗಿದೆ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಶೇ.50 ರಿಂದ 60 ಮಾತ್ರ ಮತದಾನ ಆಗುತ್ತಿದ್ದು, ಚುನಾವಣಾ ಆಯೋಗವು ಮತದಾರರಿಗೆ ಮನವೊಲಿ ಸುವಂತಹ ಕಾರ್ಯ ಮಾಡುತ್ತಿದೆ ಎಂದರು.
ಎಎಸ್ಪಿ ಎಂ. ರಾಜೀವ್ ಮಾತನಾಡಿ, ಇತ್ತೀಚಿನ ಅಂಕಿ -ಅಂಶಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ ವಿದ್ಯಾವಂತರೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಮ್ಮ ನಾಯಕನ್ನು ನಾವೇ ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ. ಜಾತಿ, ಜನಾಂಗ, ಧರ್ಮ, ಮತಕ್ಕೆ ಸೀಮಿತವಾಗದೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಡಿಡಿಪಿಯು ನಾಗರಾಜ್ ಇದ್ದರು.
ಸಿದ್ದಗಂಗಾ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸ್ವಾಗತಿಸಿದರು. ಉಪ ಆಯುಕ್ತ ಸಿ. ಚಂದ್ರಪ್ಪ ವಂದಿಸಿದರು.
ಬಹುಮಾನ : ಯುವ ಜನತೆಯಲ್ಲಿ ಮತದಾನದ ಅರಿವು ಮತ್ತು ಮಹತ್ವ ತಿಳಿಸುವ ಸಲುವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದಲ್ಲಿ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ಜಯಶ್ರೀ ಮೊದಲನೇ ಬಹುಮಾನ, ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ನಿವೇದಿತಾ ಮೂರನೇ ಬಹುಮಾನ, ಪ್ರೌಢಶಾಲೆ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಎಸ್.ಯು. ಭಾವನ ತೃತೀಯ ಮತ್ತು ಇಂಗ್ಲಿಷ್ ಪ್ರಬಂಧ ಸ್ಪರ್ಧೆ ಯಲ್ಲಿ ಅಂಕಿತ ಎರಡನೇ ಬಹುಮಾನ ಪಡೆದ್ದಾರೆ.