ಜನ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಜಿಲ್ಲೆಯಿಂದ 50 ವಾಹನಗಳು ಭಾಗಿ

ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಚಾಲನೆ

ದಾವಣಗೆರೆ, ಜ.25- ಬೆಂಗಳೂರಿನಲ್ಲಿ ಜ.26ರಂದು ನಡೆಯಲಿರುವ ಜನ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಜಿಲ್ಲೆಯಿಂದ ರೈತರ ವಾಹನಗಳು ಸೇರಿ ಸುಮಾರು 40ರಿಂದ 50 ವಾಹನಗಳು ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಂಜೆ ನಗರದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಜನ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲಿರುವ ವಾಹನಗಳಿಗೆ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಚಾಲನೆ ನೀಡಿದರು.

ರೈತ ವಿರೋಧಿ ಕಾನೂನುಗಳ ವಿರುದ್ಧ ಬೆಂಗಳೂರಿನಲ್ಲಿ ರಾಜ್ಯದ ರೈತರು ತಮ್ಮ-ತಮ್ಮ ವಾಹನಗಳ ಮೂಲಕ ಜನ ಗಣರಾಜ್ಯೋತ್ಸವ ಪರೇಡ್ ನಡೆಸುತ್ತಿದ್ದಾರೆ. ಅಲ್ಲಿನ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಹೋರಾಟಕ್ಕೆ ಸರ್ಕಾರ ಮಣಿದು ಕಾಯ್ದೆಗಳನ್ನು ವಾಪಾಸ್ ಪಡೆಯದಿದ್ದರೆ, ಮುಂದಿನ ದಿನಗಳಲ್ಲಿ ಹೋರಾ ಟದ ರೂಪು ರೇಷೆಗಳನ್ನು ಬದಲಾಯಿಸಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

ವಕೀಲ ಅನೀಸ್ ಪಾಷ ಮಾತನಾಡಿ, ಸರ್ಕಾರಗಳು ಕಾನೂನುಗಳನ್ನು ಬದಲಾಯಿಸಿ ರೈತರ ಮೇಲೆ ದೌರ್ಜನ್ಯ ಎಸೆಗುತ್ತಿವೆ. ಈ ದೌರ್ಜನ್ಯಗಳನ್ನು ಪ್ರಶ್ನಿಸಿ ಹೋರಾಟಕ್ಕೆ ಇಳಿದರೆ, ಬೇರೆ-ಬೇರೆ ರೀತಿಯಲ್ಲಿ ಹೋರಾಟಗಳನ್ನು ಹತ್ತಿಕ್ಕುವಂತಹ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ಆದರೆ ಈ ಬಾರಿ ಮಾತ್ರ ರೈತರು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಸಾದ್ ರೆಡ್ಡಿ ಕಬ್ಬಳ, ಬಲ್ಲೂರು ಆರ್. ನಾಗರಾಜರೆಡ್ಡಿ, ತ್ಯಾವಣಿಗೆ ಕರಿಬಸಪ್ಪ, ಕರೇಕಟ್ಟೆ ಗದಿಗೇಶಿ, ಜಿ. ಅಣ್ಣಪ್ಪ, ಬಲ್ಲೂರ್ ಪರಶುರಾಮ್ ರೆಡ್ಡಿ, ನಾಗರಕಟ್ಟೆ ಬಸವನಗೌಡ, ಆವರಗೆರೆ ಬಸಜ್ಜ, ಆವರಗೆರೆ ಜಯಣ್ಣ, ಪಾಮೇನಹಳ್ಳಿ ಲಿಂಗರಾಜ್, ಈಚಘಟ್ಟ ಕರಿಬಸಪ್ಪ, ಸತೀಶ್ ಅರವಿಂದ್, ಮುಸ್ತಾಫಾ ಸೇರಿದಂತೆ ಇತರರು ಇದ್ದರು.

error: Content is protected !!