ಕೊರೊನಾ ಕಾರಣದಿಂದ ಗುಳೇದ ಲಕ್ಕಮ್ಮ ಜಾತ್ರೆ ರದ್ದು : ಸರಳ ಆಚರಣೆಗೆ ಅವಕಾಶ ಕಲ್ಪಿಸಲು ಒತ್ತಾಯ

ಹರಪನಹಳ್ಳಿ, ಜ.24 – ಲಕ್ಷಾಂತರ ಭಕ್ತರನ್ನು ಹೊಂದಿ ಅರಣ್ಯದಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿ ಸಲ್ಪಡುವ ಹೆಸರಾಂತ ಗುಳೇದ ಲಕ್ಕಮ್ಮ ಜಾತ್ರಾ ಮಹೋತ್ಸವನ್ನು ಸರಳವಾಗಿ ಆಚರಿಸಲು ಅವಕಾಶ ನೀಡಬೇಕು ಎಂದು ಜಾತ್ರಾ ಸಮಿತಿ ತಾಲ್ಲೂಕು ಹಾಗೂ ಜಿಲ್ಲಾಡಳಿತವನ್ನು  ಒತ್ತಾಯಿಸಿದೆ.

ಈ ಕುರಿತು ತಾಲ್ಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್. ಚಂದ್ರಪ್ಪ ಅವರು, ನಾಡಿದ್ದು ದಿನಾಂಕ 26 ರಿಂದ 28 ರವರೆಗೆ ಗ್ರಾಮದ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಪ್ರತಿ ಎರಡು ವರ್ಷದಂತೆ ಈ ಬಾರಿ ಜಾತ್ರೆ ಬಂದಿದೆ, ಆದರೆ ಕೋವಿಡ್ ಹಿನ್ನೆಲೆಯಲ್ಲಿ  ತಾಲ್ಲೂಕು ಆಡ ಳಿತ ಜಾತ್ರೆಯನ್ನು ರದ್ದುಗೊಳಿಸಿದೆ ಎಂದು ತಿಳಿಸಿದರು.

ಕೋವಿಡ್ ಬಹಳಷ್ಟು ಇಳಿಮುಖವಾಗಿದ್ದರಿಂದ ಬೇರೆ ಬೇರೆ ಕಡೆ ಜಾತ್ರೆಗಳು ಸರಳ ರೀತಿಯಲ್ಲಿ ನಡೆಯುತ್ತಿವೆ. ರಾಜಕೀಯ ಪಕ್ಷಗಳ ರಾಲಿಗಳು ಲಕ್ಷಾಂತರ ಕಾರ್ಯಕರ್ತರ ಮಧ್ಯೆ ನಡೆದಿವೆ, ಆದರೆ ನಮ್ಮ ಜಾತ್ರೆ ರದ್ದು ಮಾಡಿರುವುದು ಆಶ್ಚರ್ಯ ತಂದಿದೆ ಎಂದ ಅವರು ಸರಳ ರೀತಿಯಲ್ಲಿ ಆಚರಿಸಲು ಅನುಮತಿ ನೀಡಬೇಕು. ನಾವು ಕೂಡ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತವೆ ಎಂದು ಅವರು ವಿನಂತಿಸಿದರು.

ಊರಲ್ಲಿ ಗುಳೇದ ಲಕ್ಕಮ್ಮ ದೇವಿ ದೇವಸ್ಥಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದಿ. ಮಾಜಿ ಶಾಸಕ ಎಂ.ಪಿ.ರವೀಂದ್ರ ತಳಪಾಯ ನಿರ್ಮಿಸಿ ಕೊಟ್ಟಿದ್ದರು.ನಂತರ ಗ್ರಾಮದವರ 10 ಲಕ್ಷ ರೂ. ನೆರವಿನೊಂದಿಗೆ ಅಂದಾಜು 35 ಲಕ್ಷ ರೂ.ಗಳ ವೆಚ್ಚದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಗ್ರಾಮದ ಮುಖಂಡರಾದ ಎಚ್.ಎಂ.ಕೊಟ್ರೇಶ್‍, ಬಣಕಾರ ಗಂಗಾಧರಪ್ಪ, ಟಿ.ಹಾಲೇಶ, ಕೆ.ಭಾಷು ಸಾಬ್, ಟಿ.ಓಮೇಶ, ಎಸ್.ಚಂದ್ರಪ್ಪ, ಟಿ.ಲಕ್ಕೇಶ, ಎಚ್. ಕೊಟ್ರಪ್ಪ, ಎಚ್.ಮಹಾದೇವಪ್ಪ, ಕೆ.ನಾಗರಾಜ್‍ ಕುಂಬಾರ, ನಾಗೇಂದ್ರಪ್ಪ ಬಾರಿಕರ, ಕೃಷ್ಣಪ್ಪ ಬಡಿಗೇರ, ಮಹಾದೇವಪ್ಪ, ಹೊಳಿಯಪ್ಪ ಉಪಸ್ಥಿತರಿದ್ದರು.

error: Content is protected !!