ಚಂಚಲತೆ ಕಡಿಮೆ ಮಾಡಿ, ಏಕಾಗ್ರತೆ ಅಳವಡಿಸಿಕೊಳ್ಳಿ

ಹರಿಹರ, ಜ.24- ತಂದೆ-ತಾಯಿಗಳ ಸಂಸ್ಕಾರ, ಕಾಯಕ ನಿಷ್ಠೆ ಮಕ್ಕಳಿಗೆ ಆದರ್ಶ ವಾಗಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಶ್ರೀ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.

ನಗರದ ನಿವೃತ್ತ ಪ್ರಾಂಶುಪಾಲ ಎಸ್.ಹೆಚ್. ಪ್ಯಾಟಿ ಅವರ ಧರ್ಮಪತ್ನಿ ದಿ. ಮಧುಮತಿಯವರ ಪ್ರಥಮ ವರ್ಷದ ಪುಷ್ಯಸ್ಮರಣೆ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ, ಅವರು ಮಾತನಾಡಿದರು.

ಸಮಾಜದಲ್ಲಿ ಪ್ರಗತಿ ಕಾಣಲು ಮೊದಲು ತಂದೆ-ತಾಯಿ, ಗುರು- ಹಿರಿಯರಿಗೆ, ಬಂಧು-ಬಳಗದವರಿಗೆ ಹೆಚ್ಚು ಗೌರವ ನೀಡಿದಾಗ ಅದರಿಂದ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಸಮಾಜದಲ್ಲಿ ಫಲ ದೊರೆಯುತ್ತದೆ ಎಂದು ಹೇಳಿದರು.

ಮನಸ್ಸಿನ ಚಂಚಲತೆ ಕಡಿಮೆ ಮಾಡಿ ಕೊಂಡು ಏಕಾಗ್ರತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿ ಗೃಹಿಣಿ ಎಷ್ಟು ಶಾಂತವಾಗಿ ಇರುತ್ತಾಳೋ ಅಂತಹ ಕುಟುಂಬದಲ್ಲಿ ಶಾಂತಿ ಹೆಚ್ಚಾಗಿ ಇರುತ್ತದೆ ಮತ್ತು ಯಾವುದೇ ರೀತಿಯ ಸಂಕಷ್ಟ ಕಡಿಮೆ ಇರುತ್ತದೆ. ಗೃಹಿಣಿ ಸಂಸಾರವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವ ಸಮಯದಲ್ಲಿ ವಿವಿಧ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ಬಹಳ ತಾಳ್ಮೆಯಿಂದ ವರ್ತಿಸುವುದು ಬಹಳ ಅವಶ್ಯವಾಗಿದೆ. ಇದರಿಂದಾಗಿ ಹೆಚ್ಚಿನ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.

ಪುರುಷರು ಸಮಾಜದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ ಎಂದರೆ, ಅದರಲ್ಲಿ ಮನೆಯ ಗೃಹಿಣಿಯ ಪಾತ್ರ ಬಹುಮುಖ್ಯ ಭಾಗವಾಗಿದೆ. ಅವರು ತಮ್ಮ ಪತಿ ಸಮಾಜದಲ್ಲಿ ಬೆಳವಣಿಗೆ ಕಾಣಲು ಶ್ರಮವಹಿಸಿ ಸಂಸ್ಕಾರವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅಂತಹ ಸಾಮರ್ಥ್ಯದ ಮೂಲಕ ಗೃಹಿಣಿ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ಪುರುಷರಿಗೆ ಸರಿ ಸಮಾನವಾಗಿ ನಿಭಾಯಿಸುತ್ತಾರೆ ಎಂದು ಹೇಳಿದರು.  

ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಉದ್ಯೋಗ ಎಲ್ಲವನ್ನೂ ಸರಿಯಾಗಿ ಕೊಡಿಸಿದ್ದರೂ ಸಹ ಇಂದಿನ ಕಾಲದಲ್ಲಿ ಮಕ್ಕಳು ತಮ್ಮ ಪೋಷಕರಿಗೆ ವೃದ್ಧಾಶ್ರಮಕ್ಕೆ ಕಳಿಸುವುದನ್ನು ಕಾಣುತ್ತೇವೆ. ಆದರೆ ಆ ಪ್ರವೃತ್ತಿಯನ್ನು ಮಕ್ಕಳು ತಮಗೆ ಎಷ್ಟೇ ಕಷ್ಟ ಬಂದರೂ ಸಹ ಕೈ ಬಿಡಬೇಕು. ಕಾರಣ ವೃದ್ಧಾಪ್ಯದ ಸಮಯದಲ್ಲಿ ಪೋಷಕರ ಹಿತಚಿಂತನೆ ಮತ್ತು ಯೋಗಕ್ಷೇಮ ಹಾಗೂ ಸಂರಕ್ಷಣೆ ಬಹಳ ಅವಶ್ಯಕತೆ ಇರುತ್ತದೆ. ಇದರಿಂದಾಗಿ ಅವರಿಗೆ ತಾವು ಕಷ್ಟಪಟ್ಟು ಓದಿಸಿದ್ದು ಸಾರ್ಥಕವಾಗುತ್ತದೆ ಮತ್ತು ಅವರನ್ನು ಚೆನ್ನಾಗಿ ನೋಡಿಕೊಂಡು ಹೋದರೆ ಅದರ ಫಲ ತಮ್ಮ ಮಕ್ಕಳಿಗೆ ದೊರೆಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಎಸ್.ಹೆಚ್. ಪ್ಯಾಟಿ, ಹೇಮನಗೌಡ್ರು, ಇಂಜಿನಿಯರ್ ಗುರುಪ್ರಸಾದ್, ಸಿ.ವಿ‌. ಪಾಟೀಲ್, ಯೋಗೀಶ್ ಪಾಟೀಲ್, ಹೆಚ್. ನಿಜಗುಣ, ಜಿಗಳಿ ಮಂಜುನಾಥ್ ಮತ್ತು ಇತರರಿದ್ದರು.

error: Content is protected !!