28 ರಂದು ಹರಿಹರಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ

ಹರಿಹರ, ಜ.22- ಕೂಡಲಸಂಗಮ ಪಂಚಮಸಾಲಿ ಸಮಾಜದ ಪ್ರಥಮ ಗುರುಪೀಠಾಧ್ಯಕ್ಷರಾದ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಧರ್ಮ ಪ್ರಚಾರದ ಜೊತೆಗೆ ಸಮಾಜ ಸಂಘಟನೆ ಹಾಗೂ ಸಮಾಜದ ಜನರ ಒಳಿತಿಗಾಗಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದಕ್ಕೆ 2ಎ ಮೀಸಲಾತಿ ಮತ್ತು ಕೇಂದ್ರ ಸರ್ಕಾರದ ಒಬಿಸಿ ಸೌಲಭ್ಯಗಳನ್ನು ಪಡೆಯಲು ಪಾದಯಾತ್ರೆ ಮಾಡುವ ಮೂಲಕ ಹೋರಾಟದ ಹಾದಿಯನ್ನು ತುಳಿದಿದ್ದು, ಅವರನ್ನು  ಹರಿಹರ ನಗರಕ್ಕೆ ಇದೇ ದಿನಾಂಕ 28 ರಂದು ಸ್ವಾಗತಿಸಲು ಅದ್ಧೂರಿಯಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡರೂ ಆದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.

ನಗರದ ಹೆಚ್. ಶಿವಪ್ಪ ವೃತ್ತದಲ್ಲಿರುವ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದಾಗ,  ಮುಖ್ಯಮಂತ್ರಿಗಳು ಮತ್ತು ಅನೇಕ ಸಚಿವರು ಆದಷ್ಟು ಬೇಗ ಮೀಸಲಾತಿ ಕೊಡುವ ಭರವಸೆ ನೀಡಿದ್ದರು. ಹಾಗಾಗಿ ಹೋರಾಟದ ಹಾದಿಯಿಂದ ಹಿಂದೆ ಸರಿದರು. 

ಆದರೆ, ನಂತರದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಾಗ ಇದೇ ದಿನಾಂಕ 14 ರಿಂದ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಅವರು ತಿಳಿಸಿದರು.

ಇದೇ ದಿನಾಂಕ 28 ಗುರುವಾರ ಸಂಜೆ 4 ಗಂಟೆಗೆ ಹರಿಹರ ನಗರಕ್ಕೆ ಪಾದಯಾತ್ರೆ ಆಗಮಿಸಲಿದ್ದು, ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯ ಮೂಲಕ ನಗರದ ಗಾಂಧಿ ಮೈದಾನದಲ್ಲಿ  ಹಮ್ಮಿಕೊಂಡಿರುವ ಬೃಹತ್ ಸಮಾವೇಶದ ವೇದಿಕೆಗೆ ಶ್ರೀಗಳನ್ನು ಕರೆ ತರಲಾಗುತ್ತದೆ. 

ಸಮಾವೇಶದಲ್ಲಿ ಹರಪನಹಳ್ಳಿ, ರಾಣೇಬೆನ್ನೂರು, ಹಾವೇರಿ, ಹೊನ್ನಾಳಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ಭಕ್ತರು ಆಗಮಿಸುತ್ತಾರೆ. ಅವರಿಗೆ ಊಟ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸುಮಾರು 30×60 ಅಡಿಯಲ್ಲಿ ವೇದಿಕೆಯ ನಿರ್ಮಾಣ ಮಾಡಲಾಗುತ್ತಿದೆ. 8 ಊಟದ ಸ್ಥಳವನ್ನು ನಿಗದಿ ಮಾಡಲಾಗಿದೆ. 

ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ರಾಜ್ಯದ ವಿವಿಧ ಸಮಾಜಗಳ ಶ್ರೀಗಳು,  ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ವೀಣಾ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಅನೇಕ ಮಾಜಿ ಸಂಸದರು , ಶಾಸಕರು ಭಾಗವಹಿಸಲಿದ್ದಾರೆ.

ಸಮಾವೇಶದ ಸಮಿತಿಯ ಅಧ್ಯಕ್ಷ ದೀಟೂರು ಶೇಖರಪ್ಪ, ಉಪಾಧ್ಯಕ್ಷ ಪರಮೇಶ್ವರ ಗೌಡ್ರು, ಮಿಟ್ಟಲಕಟ್ಟಿ ಚಂದ್ರಪ್ಪ, ಹೆಚ್.ಎಸ್. ಅರವಿಂದ್, ತಾ.ಪಂ. ಸದಸ್ಯ ಸಿರಿಗೆರೆ ಕೊಟ್ರೇಶಪ್ಪ, ನಿಂಗಪ್ಪ ಭಾನುವಳ್ಳಿ, ಜಿ.ಕೆ. ವೀರಣ್ಣ, ಅಬ್ಳೂರಪ್ಪ ಗಂಗನರಸಿ, ನಾಗಪ್ಪ ದೀಟೂರು, ನಂಜಪ್ಪ, ಕಮಲಾಪುರ ಹಾಲಸಿದ್ದಪ್ಪ, ಶಿವಪ್ಪ ದೀಟೂರು, ದೇವರಬೆಳಕೆರೆ ಕರಿಬಸಪ್ಪ, ಪರಮೇಶ್ವರ ಜಿಗಳಿ, ಡಾ. ನಾಗರಾಜ್, ರುದ್ರಪ್ಪ, ಕೆ.ಜಿ. ರಾಮು, ರಾಮನಗೌಡ್ರು, ಕರೆಗೌಡಪ್ಪ, ಮೈಲಾರಪ್ಪ, ಬಸಟ್ಟೆಪ್ಪ ಬೇವಿನಹಳ್ಳಿ, ಸಾರಥಿ ರುದ್ರಪ್ಪ, ವೇದಮೂರ್ತಿ, ಬಸವರಾಜಪ್ಪ, ಮಹೇಶ್ ಭಾನುವಳ್ಳಿ, ಈಶ್ವರಪ್ಪ ಹಾಗು ಇನ್ನಿತರರು ಹಾಜರಿದ್ದರು.

error: Content is protected !!