ಜಗಳೂರು, ಜ2 – ಕೆರೆ ತುಂಬಿಸುವ ಯೋಜನೆಯಿಂದ ಬರಪೀಡಿತ ಜಗಳೂರು ಕ್ಷೇತ್ರದ ರೈತರ ಬದುಕು ಹಸನಾಗಲಿದೆ ಎಂದು ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್. ವಿ. ರಾಮಚಂದ್ರ ಹೇಳಿದರು.
ತಾಲ್ಲೂಕಿನ ಗುತ್ತಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವದಂಡೆ ಗ್ರಾಮದಲ್ಲಿ ಇಂದು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ಹಾಗೂ ಆಂಜನೇಯ ಕೆರೆ ಅಭಿವೃದ್ದಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೆರೆ ಸಂಜೀವಿನಿ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿರಿಗೆರೆ ಶ್ರೀಗಳ ಆಶಯ ಮತ್ತು ಆಶೀರ್ವಾದದಿಂದ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಶೀಘ್ರದಲ್ಲಿ ಕೆರೆಗಳು ಮೈದುಂಬಿ ಹರಿಯಲಿವೆ. ಬರದ ನಾಡಿನ ರೈತರ ಬವಣೆ ಕೊನೆಯಾಗಲಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತ ಸರ್ಕಾರ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದೆ. 2021 ಮಾರ್ಚ್ ವೇಳೆಗೆ ಕಾಮಗಾರಿ ಶಂಕು ಸ್ಥಾಪನೆಗೆ ಅದ್ದೂರಿ ಚಾಲನೆ ನೀಡಲಾಗುವುದು ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕೆರೆಗಳ ಹೂಳೆತ್ತುವ ಕಾರ್ಯ ಶ್ಲಾಘನೀಯ ಕೆಲಸವಾಗಿದ್ದು, ಶಾಸಕರ ಅನುದಾನದಡಿ 5 ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ಜಿಪಂ ಅಧ್ಯಕ್ಷರಾದ ಶಾಂತಕುಮಾರಿ ಶಶಿಧರ ಮಾತನಾಡಿ, ಧರ್ಮಸ್ಥಳ ಸಂಘದಿಂದ ತಾಲ್ಲೂಕಿನ ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಿ ವ್ಯವಹಾರ ಜ್ಞಾನದ ಜೊತೆ ಬದುಕಿನಲ್ಲಿ ಚೈತನ್ಯ ಮೂಡಿಸುತ್ತಿದೆ. ಸಂಸ್ಥೆಯ ಸಾಮಾಜಿಕ ಕಳಕಳಿ ಪ್ರಶಂಸನೀಯ ಎಂದರು. ನಿರ್ದೇಶಕ ಜನಾ ರ್ಧನ್ ಮಾತನಾಡಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದಿಂದ ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಕೈಜೋಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೆರೆ ಸಂರಕ್ಷಣೆ ಮತ್ತು ಪ್ರಾಧಿಕಾರದ ಶಂಭುಲಿಂಗ, ಆಂಜನೇಯ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಶಿವಣ್ಣಗೌಡ, ಗ್ರಾ.ಪಂ ಸದಸ್ಯರಾದ ಹನುಮಂತಪ್ಪ, ರಂಗಸ್ವಾಮಿ, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಗುಣಕಾರ್, ಮೇಲ್ವಿಚಾರಕರಾದ ಯಾಸ್ಮೀನ್ ಶಿವಾನಂದ್, ಗಣೇಶ್, ಭಗವಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.