ಹರಪನಹಳ್ಳಿಯಲ್ಲಿ ಎನ್.ಎಸ್.ಯು.ಐ. ಪ್ರತಿಭಟನೆ
ಹರಪನಹಳ್ಳಿ, ಜ.21 – ವಿದ್ಯಾರ್ಥಿ ವೇತನ, ಉಚಿತ ಬಸ್ ಪಾಸ್‍ನೀಡುವಂತೆ ಒತ್ತಾಯಿಸಿ ಎನ್.ಎಸ್.ಯು.ಐ ವತಿಯಿಂದ ಇಂದಿಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಜೀಷಾನ್ ಮಾತನಾಡಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ಇಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜಾರಿ ಮಾಡಲಾಗಿದ್ದ ವಿದ್ಯಾರ್ಥಿ ವೇತನ, ಉಚಿತ ಬಸ್ ಪಾಸ್ ಯೋಜನೆಗಳನ್ನು ತಡೆ ಹಿಡಿಯಲಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ತಾಂತ್ರಿಕ ಕ್ಷಮತೆ ಹೆಚ್ಚಿಸಲು ರೂಪಿಸಲಾಗಿದ್ದ ಲ್ಯಾಪ್ ಟಾಪ್ ಯೋಜನೆಯನ್ನೂ ಕೂಡ ಮೊಟಕುಗೊಳಿಸಲಾಗಿರು ತ್ತದೆ. ಇವುಗಳಿಗೆಲ್ಲ ಸರ್ಕಾರ ಆರ್ಥಿಕ ಸಂಕಷ್ಟದ ನೆಪ ಹೇಳುತ್ತಿದೆ. ಆದರೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರುಗಳ ಸಂಬಳ ಮತ್ತು ಖರ್ಚುಗಳು ಯಾವುದೇ ಸಂಕಷ್ಟಗಳಿಲ್ಲದೇ ಭರಿಸಲಾಗುತ್ತಿದೆ. ಆದರೆ ನಾಡಿನ ಉಜ್ವಲ ಭವಿಷ್ಯದ ಜವಾಬ್ದಾರಿ ಹೊತ್ತ ವಿದ್ಯಾರ್ಥಿಗಳ ಶೈಕ್ಷಣಿಕ ಸಹಕಾರಗಳ ಬಗ್ಗೆ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಎನ್.ಎಸ್.ಯು.ಐ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ್ ಯಾದವ್ ಮಾತನಾಡಿ, ಉಚಿತ ಬಸ್‍ಪಾಸ್ ಯೋಜನೆ ಹಾಗೂ ಲ್ಯಾಪ್ ಟಾಪ್ ಯೋಜನೆಯನ್ನು ಹಿಂಪಡೆದಿರುವ ಕಾರಣಕ್ಕೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಕುಂದಿಸಿರುತ್ತದೆ ಎಂದು ಹೇಳಿದರು.
ಕೋವಿಡ್ ಮಹಾಮಾರಿ ಸೃಷ್ಟಿಸಿರುವ ಆರ್ಥಿಕ ಸಂಕಷ್ಟಗಳ ಸಂದರ್ಭದಲ್ಲಿಯೇ ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಸಮಾಜದ ಎಲ್ಲ ವರ್ಗಗಳಲ್ಲಿನ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿ ಮಾಡಿವೆ. ಲ್ಯಾಪ್ ಟಾಪ್ ಯೋಜನೆಯನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಿವೆ. ಜೊತೆಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ಮೇಲ್ದರ್ಜೆಗೇರಿಸಿ ಆಧುನಿಕರಣಗೊಳಿಸಿವೆ. ರಾಜ್ಯದ ಆದಾಯದ ಶೇ. 30 ರಷ್ಟನ್ನು ಶಿಕ್ಷಣಕ್ಕಾಗಿಯೇ ಮೀಸಲಿಡುವ ಚಿಂತನೆಯನ್ನೂ ಕೂಡ ವಿಧಾನಸಭೆಗಳಲ್ಲಿ ಚರ್ಚೆಗೆ ಇಡಲಾಗಿದೆ. ಕರ್ನಾಟಕ ಸರ್ಕಾರವೂ ಕೂಡ ಈ ನಿಟ್ಟಿನಲ್ಲಿ ಆಲೋಚಿಸುವಂತಾಗಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ ಪದಾಧಿಕಾರಿಗಳಾದ ಲಾಟಿ ಅಮೀರ್ ಸೊಹೈಲ್, ಟಿ.ಕುಶಾಲ್, ಸಾಲಮೂರಹಳ್ಳಿ ಸಾಧಿಕ್, ಬಿ.ಮೋಹನ್ ನಾಯ್ಕ, ಮಹಮ್ಮದ್ ರಿಹಾನ್, ಎಲ್.ಗಣೇಶ್, ಡಂಕಿ ವಾಸೀಂ, ದೊರೆ ಬಂಜಾರ, ಶಂಶು ಕೋಲಕಾರ, ಹೆಚ್. ಮುಖೀದ್, ಉಳ್ಳಂಗಿ ಗಾಂಧಿ, ಎಸ್.ಎಂ.ಡಿ ವಾಸೀಂ, ಮಂಜುನಾಥ, ಎಂ.ಎಸ್.ನಫಾಸ್, ಆರ್.ನವೀನ್, ಗೌಸ್ ಎಂ, ಎಂ.ನಾಗರಾಜ, ಅಬು ಸಾಲೇಹ, ರಶೀದ್, ಸಮೀರ್.ಪಿ, ಹಡಗಲಿ ಅಬುಸಾಲೇಹ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.