ಇನ್ನಷ್ಟು ದಿನ ಮಾರ್ಗಸೂಚಿ ಪಾಲಿಸಿ, ಸಹಕರಿಸಲು ಕರೆ

ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನ್ಯಾಯಾಧೀಶರಾದ ಕೆ.ಬಿ. ಗೀತಾ

ದಾವಣಗೆರೆ, ಜ.20- ಕೊರೊನಾಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಮಾರ್ಗ ಸೂಚಿಗಳನ್ನು ವಕೀಲರು ಕಡ್ಡಾಯವಾಗಿ ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ. ಗೀತಾ ಹೇಳಿದರು.

ನಗರದ ಜಿಲ್ಲಾ ವಕೀಲರ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಕೀಲರ ಸಂಘದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಕಾಲಕಾಲಕ್ಕೆ ಬದಲಾಗುತ್ತಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಬಂದಿದ್ದೀರಿ. ಪ್ರಾಯಶಃ ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಮಾರ್ಗಸೂಚಿಗಳಿಗೆ ಮುಕ್ತಿ ಸಿಗಬಹುದು. ಆದ್ದರಿಂದ ಇನ್ನಷ್ಟು ದಿನ ಅಚ್ಚುಕಟ್ಟಾಗಿ ಮಾರ್ಗಸೂಚಿ ಪಾಲಿಸುವಂತೆ ಸಲಹೆ ನೀಡಿದರು.

ಪ್ರಸ್ತುತ ಇರುವ ನೂತನ ಮಾರ್ಗಸೂಚಿ ಅನ್ವಯ ನ್ಯಾಯಾಲಯದಲ್ಲಿ ಮಾಸ್ಕ್ ಧರಿಸು ವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸಬೇಕು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸದೆ, ಒಂದೆಡೆ ಶಿಸ್ತಿನಿಂದ ಪಾರ್ಕಿಂಗ್ ಮಾಡಬೇಕು ಎಂದರು.

ಬರುವ ಶನಿವಾರ ಆಡಳಿತಾತ್ಮಕ ನ್ಯಾಯಮೂರ್ತಿಗಳು ಆಗಮಿಸುವ ನಿರೀಕ್ಷೆ ಇದೆ. ನಮಗಿಂತ ನೂರು ಪಟ್ಟು ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸುವ ಅವರ ಮುಂದೆ ನಾವು ಶಿಸ್ತಿನಿಂದಿರಬೇಕು ಎಂದು ಹೇಳಿದರು.

ಬರುವ ಫೆಬ್ರವರಿ 1ರಿಂದ ಎಲ್ಲರು ಕಡ್ಡಾಯ ವಾಗಿ ನ್ಯಾಯವಾದಿ ಸಮವಸ್ತ್ರ ಧರಿಸಿಕೊಂಡು ಬರಬೇಕು. ಕಚೇರಿಗಳಿಗೆ ಅನಗತ್ಯವಾಗಿ ಬರುವುದನ್ನು ತಪ್ಪಿಸಿ, ಫೈಲಿಂಗ್ ಕೌಂಟರ್‌ನಲ್ಲಿ ಫೈಲ್‌ಗಳನ್ನು ಇಟ್ಟು ಹೋಗಬೇಕು. ಆದಷ್ಟೂ ದೂರವಾಣಿ ಸಂಭಾಷಣೆಗಳಿಗೆ ಆದ್ಯತೆ ನೀಡಬೇಕು ಎಂದರು. ಈ ಹಿಂದಿನ ವಕೀಲರ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಹಕಾರ ನೀಡಿ, ಸಮಯದ ಇತಿಮಿತಿಯಲ್ಲಿ ಕೆಲಸ ಕಾರ್ಯಗಳು ಪೂರ್ಣವಾಗಲು ಸಹಕರಿಸಿದ್ದಾರೆ. ಅದೇ ರೀತಿಯ ಸಹಕಾರವನ್ನು ನೂತನ ಪದಾಧಿಕಾರಿಗಳೂ ನೀಡಲಿ ಎಂದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನ್ಯಾಯಾಲಯದ ಆವರಣದಲ್ಲಿನ ಕ್ಯಾಂಟಿನ್ ಬಳಸಿಕೊಳ್ಳಿ. ಹಾಳಾದ ಹಳೆಯ ನೋಟರಿ ಶೆಡ್‌ಗಳನ್ನು ಬದಲಿಸುವಂತೆ ಕಿವಿಮಾತು ಹೇಳಿದರು.

ಸಂಘದ ನೂತನ ಅಧ್ಯಕ್ಷ  ಡಿ.ಪಿ. ಬಸವರಾಜ್, ಸಂಘ ಹಾಗೂ ನ್ಯಾಯಾಧೀಶರಲ್ಲಿ ಪರಸ್ಪರ ಸಹಕಾರ ಅಗತ್ಯ. ಈ ಹಿನ್ನೆಲೆಯಲ್ಲಿ ಸಂಘವು ನೀಡಿದಷ್ಟೇ ಸಹಕಾರವನ್ನು ನ್ಯಾಯಾಧೀಶರು ನೀಡಬೇಕು ಎಂದರು. ಚುನಾವಣಾ ಆಯೋಗದ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯನ್ನು ಸುಲಲಿತವಾಗಿ ನಡೆಸಿಕೊಟ್ಟಿದ್ದು ಶ್ಲ್ಯಾಘನೀಯ. ಮುಂದೆಯೂ ಇದೇ ರೀತಿ ಚುನಾವಣೆಗಳು ನಡೆಯಲಿ ಎಂದು ಆಶಿಸಿದರು.

ನೂತನ ಅಧ್ಯಕ್ಷ  ಡಿ.ಪಿ. ಬಸವರಾಜ್, ಉಪಾಧ್ಯಕ್ಷ ಬಿ.ಬಿ. ರಾಮಪ್ಪ, ಕಾರ್ಯದರ್ಶಿ ಲೋಕಿಕೆರೆ ಹೆಚ್. ಪ್ರದೀಪ್, ಸಹ ಕಾರ್ಯ ದರ್ಶಿ ಜಿ.ಕೆ. ಬಸವರಾಜ್ ಅವರುಗಳಿಗೆ ಅಧಿಕಾರ ಹಸ್ತಾಂತರಿಸಿ, ನಂತರ ಅಭಿನಂದಿಸಲಾಯಿತು.

ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರಾದ ಶ್ರೀಮತಿ ನಾಗಶ್ರೀ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ,  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಕಲಾ, ಪ್ರಧಾನ ಮತ್ತು ಹಿರಿಯ ನ್ಯಾಯಾಧೀಶರಾದ ಪ್ರೀತಿ ಜೋಷಿ, ನಿಕಟ ಪೂರ್ವ ಅಧ್ಯಕ್ಷ ಎನ್.ಟಿ. ಮಂಜುನಾಥ್ ಇತರರು ಉಪಸ್ಥಿತರಿದ್ದರು. 

ಬಿ.ಎಸ್. ಲಿಂಗರಾಜ್ ನಿರೂಪಿಸಿದರು. ಕು.ಜ್ಯೋತಿ ಪ್ರಾರ್ಥಿಸಿದರು.  ದಿವಾಕರ್ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಲೋಕಿಕೆರೆ ಹೆಚ್. ಪ್ರದೀಪ್ ವಂದಿಸಿದರು.

error: Content is protected !!