ದಾವಣಗೆರೆ, ಜ.19 – ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಇದೇ ಮೊದಲ ಬಾರಿಗೆ ರೈತರ ಹೋರಾಟ ಆರಂಭವಾಗಿ ಎರಡು ತಿಂಗಳಾದರೂ ಪರಿಹಾರ ಸಿಗುತ್ತಿಲ್ಲ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಆಡಳಿತ ದಲ್ಲಿ ರೈತರಿಗೆ ರಕ್ಷಣೆಯಿಲ್ಲದಂತಾಗುತ್ತಿದೆ ಎಂದು ಎಐಸಿಸಿ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡುತ್ತಿದ್ದ ಅವರು, ರೈತರು ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಕೃಷಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ದೇಶದ ಬೆನ್ನೆಲುಬಾದ ಅನ್ನದಾತರು ಹಾಗೂ ರೈತ ಕಾರ್ಮಿಕರು ಅನಾಥ ರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಇದರ ಅಂಗವಾಗಿ ನಾಳೆ ಬುಧವಾರ ಜ.20ರಂದು ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್ ಮೂಲಕ ವಿಧಾನಸಭೆ ಯವರೆಗೆ ಪಾದಯಾತ್ರೆ ನಡೆಸುವ ಮೂಲಕ ಕೇಂದ್ರದ ಕಾಯ್ದೆಗಳ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗು ವುದು. ಈ ಹೋರಾಟದಲ್ಲಿ ರಾಜ್ಯದ 30 ಜಿಲ್ಲೆಗಳ ರೈತರು, ರೈತ ಕಾರ್ಮಿಕರು ಹಾಗೂ ರೈತರ ಹೋರಾಟಕ್ಕೆ ಬೆಂಬಲಿಸುವವರು ಭಾಗಿಯಾಗಲಿದ್ದಾರೆ ಎಂದರು.
ಸೋಲು ಖಚಿತವಾದಾಗ ಸರ್ಜಿಕಲ್ ಸ್ಟ್ರೈಕ್
2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ನೀಡಿದ್ದವು. ಈ ಕಾರಣಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿ ರಾಷ್ಟ್ರೀಯ ಮಾಧ್ಯಮಗಳ ಮೂಲಕ ಜನರನ್ನು ಭಯಭೀತರನ್ನಾಗಿ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ನಾಯಕ ಕೆ.ಹೆಚ್. ಮುನಿಯಪ್ಪ ಆರೋಪಿಸಿದ್ದಾರೆ.
ಮುಸಲೋನಿ ಹಾಗೂ ಹಿಟ್ಲರ್ ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದಬ್ಬಾಳಿಕೆಯ ಹಾಗೂ ಏಕ ವ್ಯಕ್ತಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದು ಆತ್ಮಹತ್ಯಾ ದಾರಿ ಎಂದವರು ಎಚ್ಚರಿಸಿದರು.
ಲೈಟ್ ಹಾಕೋ ಯೋಗ್ಯತೆಯೂ ಬಿಜೆಪಿಯವರಿಗಿಲ್ಲ: ಎಸ್ಸೆಸ್ಸೆಂ
ದಾವಣಗೆರೆ, ಜ. 19- ಜಿಲ್ಲೆಗೆ ಬಿಜೆಪಿ ಸರ್ಕಾರ ಇಂದಿಗೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ, ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ಹಾಗೂ ನಡೆಯಬೇಕಾಗಿರುವ ಅನೇಕ ಅಭಿವೃದ್ಧಿ ಕಾಮಗಾರಿಗಳು ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ ಅನುದಾನದಿಂದ ಎಂದು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಬೀದಿ ಲೈಟ್ ಬರ್ನ್ ಆದ್ರೆ, ಹೊಸ ಲೈಟ್ ಹಾಕೋ ಯೋಗ್ಯತೆಯೂ ಇಲ್ಲ. ಅಂತಹದರಲ್ಲಿ ಅನುದಾನ ತರಲು ಸಾಧ್ಯವೇ ? ಎಂದವರು ಪ್ರಶ್ನಿಸಿದರು.
ಕುಂದವಾಡ ಕೆರೆ ಅಭಿವೃದ್ಧಿಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ರಾಮಲಿಂಗಾರೆಡ್ಡಿ ಅವರು ಸಚಿವರಾಗಿದ್ದ ವೇಳೆ ಅನುದಾನ ನೀಡಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಪ್ರಾರಂಭವಾಗಲಿಲ್ಲ. ಇದೀಗ ಎರಡೆರಡು ಬಾರಿ ಪೂಜೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದರು. ದಾವಣಗೆರೆಗೆ ಸ್ಮಾರ್ಟ್ಸಿಟಿ ಯೋಜನೆ ಜಾರಿಗೆ ಬರಲು ಸಂಸದ ಜಿ.ಎಂ ಸಿದ್ದೇಶ್ವರ್ ಕಾರಣ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಒಂದು ಲೋಡ್ ಮಣ್ಣು ತರಲು ಇವರಿಂದ ಆಗಲ್ಲ. ಲಕ್ಷ್ಮಣ ಸವದಿಗೇನು ಗೊತ್ತು ದಾವಣಗೆರೆ ವಿಚಾರ. ಅವರು ತಮ್ಮ ಜಿಲ್ಲೆದು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರೈತ ಅಧಿಕಾರ ದಿವಸ್ ಕಾರ್ಯಕ್ರಮ ಕೈಗೊಂಡಿದ್ದು, ದಾವಣಗೆರೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಬೆಂಬಲ ಸೂಚಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಡಿಸಿಸಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಅಂಗಸಂಸ್ಥೆಗಳ ಮುಖಂಡರುಗಳು, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಮಾಜಿ ಶಾಸಕ ಹೆಚ್.ಪಿ.ರಾಜೇಶ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಕೆ.ಹೆಚ್.ಓಬಳಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ದೇವರಮನೆ ಶಿವಕುಮಾರ್, ಆಶಾ ಉಮೇಶ್, ಉದಯ್ಕುಮಾರ್, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್, ರಾಜೇಶ್ವರಿ, ದ್ರಾಕ್ಷಾಯಣಮ್ಮ, ಉಮಾ ಕುಮಾರ್, ಕವಿತಾ ಚಂದ್ರಶೇಖರ್, ಎಸ್.ಮಲ್ಲಿಕಾರ್ಜುನ್, ಹರೀಶ್ ಬಸಾಪುರ, ಸಾಗರ್, ರಾಕೇಶ್ ಮತ್ತಿತರರಿದ್ದರು.
ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷವಾದರೂ ರೈತರ ಸಾಲ ಮನ್ನಾ ಮಾಡಿಲ್ಲ, ಕನಿಷ್ಠ ಬೆಂಬಲ ಬೆಲೆಗೆ ಕ್ರಮ ತೆಗೆದುಕೊಂಡಿಲ್ಲ. ಕೃಷಿ ಮಾರುಕಟ್ಟೆಯಲ್ಲಿ ಅದಾನಿ ಹಾಗೂ ಅಂಬಾನಿಯಂಥವರಿಗೆ ಬೆಂಬಲಿಸುವ ಕಾನೂನು ತರುತ್ತಿದ್ದಾರೆ. ಇದರಿಂದಾಗಿ ರೈತರ ಬೆಳೆಗಳಿಗೆ ಎ.ಪಿ.ಎಂ.ಸಿ.ಯಲ್ಲೇ ಆಗಲೀ, ಹೊರಗಡೆಯೇ ಆಗಲಿ ಉತ್ತಮ ಬೆಲೆ ಸಿಗಲು ಸಾಧ್ಯವಾಗುವುದಿಲ್ಲ. ದೊಡ್ಡ ವ್ಯಾಪಾರಸ್ಥರು ಹೇಳಿದ ದರಕ್ಕೆ ಇಳುವರಿ ಮಾರುವ ಪರಿಸ್ಥಿತಿ ಬರಲಿದೆ ಎಂದು ಮುನಿಯಪ್ಪ ಆತಂಕ ವ್ಯಕ್ತಪಡಿಸಿದರು.
ಪಂಜಾಬ್ ಹಾಗೂ ಹರಿಯಾಣಗಳ ರೈತರು ಕೊರೆಯುವ ಚಳಿ, ಮಳೆ, ಬಿಸಿಲು ಬಂದರೂ ಜಗ್ಗದೇ ಹೋರಾಟ ನಡೆಸುತ್ತಿದ್ದಾರೆ. ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳಿಗೆ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದವರು ಹೇಳಿದ್ದಾರೆ.
ಬರುವ ಅ.26ರಂದು ದೆಹಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರಾಲಿ ಸೇರಿದಂತೆ ಎಲ್ಲ ಹೋರಾಟಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ. ಜನ ವಿರೋಧಿ ಕಾಯ್ದೆಗಳನ್ನು ರಚಿಸಿ, ರೈತರು ಹೋರಾಟ ನಡೆಸಿದರೆ ಪೊಲೀಸರ ಮೂಲಕ ತಡೆಗಟ್ಟುವ ಪ್ರಯತ್ನ ಮಾಡಿದರೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಮುನಿಯಪ್ಪ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಮುಖಂಡರಾದ ಬಿ.ಹೆಚ್. ವೀರಭದ್ರಪ್ಪ, ಎಲ್.ಹೆಚ್. ಹನುಮಂತಪ್ಪ, ಜಿ.ಪಂ. ಸದಸ್ಯ ಕೆ.ಹೆಚ್. ಬಸವಂತಪ್ಪ, ಓಬಳೇಶಪ್ಪ, ಅನಿತಾ ಬಾಯಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಲ್ಲಿಕಾರ್ಜುನ, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಅಯೂಬ್ ಪೈಲ್ವಾನ್, ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.