ದಾವಣಗೆರೆ, ಜ.19- ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿ ನಗರದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಇಂದು ಕನ್ನಡಪರ ಸಂಘಟನೆಗಳು ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.
ಕರುನಾಡ ಕನ್ನಡ ಸೇನೆ ರಾಜ್ಯ ಘಟಕದ ಪ್ರತಿಭಟನೆ: ಭಾರತದಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯಾದಾಗ (ಮಹಾಜನ್ ವರದಿ) ಆಯಾ ಭಾಷಿಗರು ಅವರ ಹಿಡಿತ ದಲ್ಲಿರುವ ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿರುವು ದನ್ನು ಅರಿಯಬೇಕಾದ ಉದ್ಧವ್ ಠಾಕ್ರೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವುದಾಗಿ ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕರುನಾಡ ಕನ್ನಡ ಸೇನೆ ಅಧ್ಯಕ್ಷ ಕೆ.ಟಿ. ಗೋಪಾಲಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಿಗರು ಕರ್ನಾಟಕದ ಒಂದು ಇಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಕೊಡಲು ಸಿದ್ಧರಿಲ್ಲ. ರಕ್ತವನ್ನು ಕೊಡುತ್ತೇ ವೆಯೇ ಹೊರತು ಕರ್ನಾಟಕದ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಈ ವಿಚಾರವಾಗಿ ಕೂಡಲೇ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ರಾಜ್ಯ ಉಪಾಧ್ಯಕ್ಷ ಶಿವರಾಜ್ ಸಾಹುಕಾರ್, ಕಾರ್ಯಾಧ್ಯಕ್ಷ ಎನ್. ರಾಜೇಂದ್ರ ಬಂಗೇರ, ಜಿಲ್ಲಾಧ್ಯಕ್ಷ ಡಿ. ಶಿವಪುತ್ರ, ಮುಖಂಡರಾದ ತಿಪ್ಪೇಶ್, ಮಲ್ಲೇಶ್, ಅವಿನಾಶ್, ದರ್ಶನ್, ಬಸವರಾಜ್, ಶಿವಕುಮಾರ್, ಆನಂದ, ಸಚಿನ್, ನಾಗರಾಜ, ಮಧುಸೂ ದನ್, ಗಿರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಠಾಕ್ರೆ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ: ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ನಂತರ ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮುಖಾಂತರ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಕೇವಲ ಮರಾಠಿ ಭಾಷಿಕರು ಅಧಿಕವಾಗಿದ್ದಾರೆಂಬ ನೆಪವನ್ನು ಮುಂದಿಟ್ಟುಕೊಂಡು ಕಳೆದ ಐದು ದಶಕಗಳಿಂದ ಮಹಾರಾಷ್ಟ್ರದ ರಾಜಕಾರಣಿಗಳು ಪದೇ ಪದೇ ಬೆಳಗಾವಿ ನಮ್ಮದು ಎಂದು ಹೇಳಿಕೆಗಳನ್ನು ನೀಡುತ್ತಾ, ಕರ್ನಾಟಕದಲ್ಲಿನ ಮರಾಠಿಗರು ಹಾಗೂ ಕನ್ನಡಿಗರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಕೆ.ಜಿ. ಯಲ್ಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದ ಅನೇಕ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಟ್ಟಾಗಿದೆ. ಆದರೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ್ರದ ರಾಜಕಾರಣಿಗಳು ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಕರ್ನಾಟಕ ಮತ್ತು ಮಹಾ ರಾಷ್ಟ್ರದ ಗಡಿ ವಿಚಾರ ಈಗ ಉಚ್ಛ ನ್ಯಾಯಾಲಯದಲ್ಲಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿಕೆ ನ್ಯಾಯಾಂಗ ನಿಂದನೆಯಾಗಲಿದೆ. ಆದ್ದರಿಂದ ಕೂಡಲೇ ನ್ಯಾಯಾ ಲಯದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಎನ್.ಹೆಚ್. ಹಾಲೇಶ್, ಕಾರ್ಯಾಧ್ಯಕ್ಷ ವಿ. ಅವಿನಾಶ್, ಮಾಲಾ, ಅಮ್ಜದ್ ಆಲಿ, ಸಂತೋಷ್ ದೊಡ್ಡಮನಿ, ಎಂ. ರವಿ, ಬಸವರಾಜ, ರಾಜು, ದೇವೇಂದ್ರಪ್ಪ, ಭೋಜರಾಜ್, ಶಾಂತಮ್ಮ, ಈರಣ್ಣ, ರಘು, ಕವಿತ ಸೇರಿದಂತೆ ಇತರರು ಪಾಲ್ಗೊಂಡಿದ್ದರು.