ಜಿಲ್ಲಾ ಪೊಲೀಸರಿಂದ ಬೈಕ್ ಜಾಥಾ

ನಿಯಮ ಪಾಲಿಸಿ ರಸ್ತೆ ಸುರಕ್ಷತೆ ಕಾಪಾಡುವಂತೆ ಜನಜಾಗೃತಿ

ದಾವಣಗೆರೆ, ಜ.18- ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸುತ್ತಾ ಸುರಕ್ಷಿತವಾಗಿ ರಸ್ತೆಗಳಲ್ಲಿ ಸಂಚರಿಸಿ ಜೀವ ರಕ್ಷಿಸಿಕೊಳ್ಳುವಂತೆ ಜಿಲ್ಲಾ ಪೊಲೀಸರು ಬೈಕ್ ಸವಾರಿ ಮುಖೇನ ಇಂದು ನಗರ ಸಂಚಾರ ಮಾಡಿ ಜನಜಾಗೃತಿ ಮೂಡಿಸಿದರು.

ಜಿಲ್ಲಾ ಪೊಲೀಸ್ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮಾಸಾಚರಣೆ-2021ರ ಪ್ರಯುಕ್ತ ಇಲಾಖೆಯ ಬೈಕ್ ಜೊತೆಗೆ ವಿವಿಧ ದುಬಾರಿ ಬೈಕ್ ಗಳನ್ನೇರಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಾಥಾ ಮುಖಾಂತರ ಜನಾಕರ್ಷಿಸಿ, ಸಂಚಾರ ನಿಯಮ ಉಲ್ಲಂಘಿಸಿದರೆ ಅಪಘಾತ, ಜೀವ ಹಾನಿ ಸಂಭವಿಸುವುದು. ಸಂಚಾರ ನಿಯಮ ಪಾಲಿಸಿದರೆ ರಸ್ತೆ ಸುರಕ್ಷತೆ ಜೊತೆಗೆ ಜೀವ ಸುರಕ್ಷಿತವಾಗಿರುವುದು ಎಂಬ ಸಂದೇಶ ಸಾರಿದರು. 

ಹೈಸ್ಕೂಲ್ ಮೈದಾನದ ಬಳಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ರಾಜೀವ್ ಈ ಜಾಥಾಗೆ ಚಾಲನೆ ನೀಡಿ ಮಾತನಾಡುತ್ತಾ, ಸಂಚಾರ ನಿಯಮ ಉಲ್ಲಂಘನೆ ತಡೆಗಾಗಿ ದಂಡ, ಜಾಗೃತಿ, ಮನವರಿಕೆ ಹೀಗೆ ನಾನಾ ರೀತಿಯಲ್ಲಿ ಜನ ರಕ್ಷಿಸುವಲ್ಲಿ ಪೊಲೀಸ್ ಇಲಾಖೆ ಸದಾ ಕಾರ್ಯಪ್ರವೃತ್ತವಾಗಿರಲಿದೆ. ಆದರೆ, ಜನರು ತಮ್ಮ ಜೀವ ರಕ್ಷಣೆಗೆ ತಾವೇ ಸ್ವಯಂ ಪ್ರೇರಿತರಾಗಿ ಸಂಚಾರ ನಿಯಮ ಪಾಲಿಸಲು ಮುಂದಾಗಬೇಕು. ಉಲ್ಲಂಘನೆಯಿಂದ ತಮ್ಮ ಜೀವಕ್ಕೆ ಆಪತ್ತು ಎಂಬ ಅರಿವಿರಬೇಕು ಎಂದು ತಿಳಿಸಿದರು.

ಎಸಿ ಕ್ರಾಸ್, ಪಿಜೆ ಕ್ರಾಸ್, ಅರುಣಾ ವೃತ್ತ, ಕೋರ್ಟ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಆರ್ ಟಿಓ ವೃತ್ತ, ಹೊಂಡದ ವೃತ್ತ, ದುರ್ಗಾಂಭಿಕಾ ದೇವಸ್ಥಾನ, ಹಗೆದಿಬ್ಬ ವೃತ್ತ, ಓಲ್ಡ್ ಬೇತೂರು ರಸ್ತೆ, ಅರಳಿ ಮರ ವೃತ್ತ, ವೆಂಕಟೇಶ್ವರ ವೃತ್ತ, ಬಂಬೂಬಜಾರ್ ರಸ್ತೆ ಸೇರಿದಂತೆ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.

ಜಾಥಾದಲ್ಲಿ ಆರ್ ಟಿಓ ಅಧಿಕಾರಿ ಶ್ರೀಧರ್, ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಪೊಲೀಸ್ ನಿರೀಕ್ಷಕರುಗಳಾದ ತಿಮ್ಮಣ್ಣ, ಗಜೇಂದ್ರಪ್ಪ, ಸುರೇಶ್ ಸಗರಿ, ನಾಗಪ್ಪ ಬಂಕಾಳಿ, ಪಿಎಸ್ ಐಗಳಾದ ಶ್ರೀಧರ್, ಇಮ್ರಾನ್, ಜಯಶೀಲ, ಸತೀಶ್ ಬಾಬು ಸೇರಿದಂತೆ ಸಂಚಾರ ಪೊಲೀಸ್ ಮತ್ತು ಆರ್ ಟಿಓ ಸಿಬ್ಬಂದಿಗಳು ಇದ್ದರು.

error: Content is protected !!