ದಾವಣಗೆರೆ. ಜ .17 – ನಮ್ಮ ಕನ್ನಡ ನಾಡು ಕಟ್ಟುವಲ್ಲಿ ನೂರಾರು ರಾಜ ಮನೆತನಗಳು ಶ್ರಮಿಸಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಶಿಲ್ಪಕಲೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆ ಮೂಲಕ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ವಿಜಯನಗರ ಸಾಮ್ರಾಜ್ಯ ಪ್ರಮುಖವಾದುದು. ಅವರ ಕಾಲದಲ್ಲಿ ಪ್ರಜೆಗಳು ಸುಖ, ಸಮೃದ್ಧಿಯಿಂದ ಇದ್ದರು. ರಾಜರು ಪ್ರಜೆಗಳ ಹಿತ ಕಾಪಾಡುತ್ತಿದ್ದರು. ಅಂತಹ ಸಾಮ್ರಾಜ್ಯವನ್ನು ಬಹುಮನಿ ಸುಲ್ತಾನರೆಲ್ಲರೂ ಒಗ್ಗೂಡಿ ಈ ವೈಭವದ ವಿಜಯನಗರ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದು ನಾಶ ಮಾಡಿದ್ದಾರೆ ಎಂದು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಪ್ರೊ. ಕೆ. ಆರ್. ಸಿದ್ದಪ್ಪನವರು ತಿಳಿಸಿದರು.
ವಿಜಯನಗರಕಾಲದ ವೈಭವವನ್ನು ನಮ್ಮ ದೇಶೀ ಇತಿಹಾಸಕಾರರಿಗಿಂತ ವಿದೇಶಿ ಪ್ರವಾಸಿಗರು ಕಣ್ಣಾರೆ ಕಂಡದ್ದನ್ನು ಅತ್ಯುತ್ತಮವಾಗಿ ದಾಖಲಿಸಿದ್ದಾರೆ. ರಾಬರ್ಟ ಸೆವೆನ್ ಎಂಬ ಆಂಗ್ಲ ಅಧಿಕಾರಿ ಸಾಂಸ್ಕೃತಿಕ ವೈಭವದ ಚಾರಿತ್ರಿಕ ಹಿನ್ನೆಲೆಯನ್ನು ದೇಶ – ವಿದೇಶಗಳಲ್ಲಿ ಹುಡುಕಿ ‘ಮರೆಯಲಾರದ ವಿಜಯನಗರ ಸಾಮ್ರಾಜ್ಯ’ ಎಂಬ ಇತಿಹಾಸ ಪುಸ್ತಕ ಬರೆದಿದ್ದಾರೆ.
ದಾವಣಗೆರೆಯ ಗ್ರಂಥ ಸರಸ್ವತಿ ಪ್ರತಿಭಾ ರಂಗವು ಕನ್ನಡಕಬ್ಬ ಉಗಾದಿಹಬ್ಬ ಕಾರ್ಯ ಕ್ರಮದಡಿ ನಡೆಸಿದ ಚಿಂತನಾ ಗೋಷ್ಠಿಯಲ್ಲಿ ‘ವಿದೇಶಿಗರು ಕಂಡ ವಿಜಯನಗರ ಸಾಮ್ರಾಜ್ಯ’ ವಿಷಯ ಕುರಿತು ಪ್ರೊ.ಕೆ. ಆರ್. ಸಿದ್ದಪ್ಪ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ವಿದೇಶಿ ಪ್ರವಾಸಿಗರಾದ ಪೋರ್ಚುಗಲ್ ದೇಶದ ಪೇಸ್, ಪರ್ಸಿಯಾದ ಅಬ್ದುಲ್ ರಜಾಕ್ ಇಟಲಿಯ ನಿಕೋಲಿಯೊಕೋಂಟೆ ಹಾಗೂ ಲೋಡೋವಿಕೊ ಒಟ್ಟೆರಮ ಎಂಬ ವಿದೇಶಿ ಪ್ರವಾಸಿಗರು ಬರೆದ ದಾಖಲೆಗಳನ್ನು ಸಂಗ್ರಹಿಸಿ ರಾಬರ್ಟ ಸೆವೆನ್ ತನ್ನ ಈ ಪುಸ್ತಕದಲ್ಲಿ ಬರೆದಿಟ್ಟಿದ್ದಾನೆ. ನಮಗೆ ಇತಿಹಾಸ ಪ್ರಜ್ಞೆ ಇಲ್ಲ. ಇತಿಹಾಸದಲ್ಲಿ ನಡೆದ ವಿಶಿಷ್ಟ ಘಟನೆಗಳನ್ನು ನಾವು ದಾಖಲಿಸುವಲ್ಲಿ ಇನ್ನೂ ಸಾಕಷ್ಟು ಸುಧಾರಿಸಬೇಕಿದೆ ಎಂದರು.
ರಾಜ್ಯ ವಾರ್ತಾ ಇಲಾಖೆಯ ವಿಶ್ರಾಂತ ನಿರ್ದೇಶಕ ಮರಡಿ ಕರಿಯಪ್ಪ ಮಾತನಾಡಿ, ಗ್ರಂಥ ಸರಸ್ವತಿ ಪ್ರತಿಭಾ ರಂಗದ ಈ ವಿಶಿಷ್ಟ ಕನ್ನಡಕಬ್ಬ ಉಗಾದಿಹಬ್ಬ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಈ ನಾಡಿನ ದಾಖಲಾರ್ಹ ಅತ್ಯಂತ ಸೋಜಿಗದ ವಿಷಯವಾಗಿದೆ. ಎಲ್ಲರೂ ಕುರ್ಕಿ ಕುಟುಂಬದವರನ್ನು ಪ್ರೋತ್ಸಾಹಿಸೋಣ ಎಂದು ಆಶಿಸಿದರು.
ಗಾನಗಂಧರ್ವ ಸಂಗೀತ ಕಲಾತಂಡದ ಸಂಗೀತ ಶಿಕ್ಷಕಿ ಶ್ರೀಮತಿ ಮಂಗಳಗೌರಿ ಅವರೊಂದಿಗೆ ಶಿಷ್ಯಂದಿರಾದ ಶೀಲಾ, ವೀಣಾ, ಸವಿತಾ ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್. ಶಿವಕುಮಾರಸ್ವಾಮಿ ಕುರ್ಕಿ ವಹಿಸಿದ್ದರು.