ಕಿಸಾನ್ ಕಾಂಗ್ರೆಸ್ ರಾಲಿಗೆ ಜಿಲ್ಲೆಯಿಂದ 5 ಸಾವಿರ ಜನ ಭಾಗಿ

ದಾವಣಗೆರೆ, ಜ.15- ಕೇಂದ್ರ ಸರ್ಕಾರದ ವಿರುದ್ಧ ಇದೇ ದಿನಾಂಕ 20 ರಂದು ಬೆಂಗಳೂರಲ್ಲಿ ಬೃಹತ್ ಕಿಸಾನ್ ಕಾಂಗ್ರೆಸ್ ರಾಲಿ ನಡೆಯಲಿದ್ದು, ದಾವಣಗೆರೆ ಜಿಲ್ಲೆಯಿಂದ ಸುಮಾರು 5 ಸಾವಿರ ಮಂದಿ ತೆರಳಲಿದ್ದಾರೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ ಶಿವಗಂಗಾ ತಿಳಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೋರಾಟದ ಯಶಸ್ಸಿಗೆ ನಮ್ಮ ಜಿಲ್ಲೆಯ ಜವಾಬ್ದಾರಿ ವಹಿಸಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯುವ ಹೋರಾಟಕ್ಕೆ ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಕಿಸಾನ್ ರಾಲಿ ಪೂರ್ವಭಾವಿ ಸಭೆ ನಡೆಸಿದ ಅವರು ಈ ವಿಷಯ ತಿಳಿಸಿದರು. 

ರೈತ ವಿರೋಧಿ ನೀತಿಗಳು ಹಾಗೂ ಕಾನೂನು ಜಾರಿಗೆ ತಂದಿರುವ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದರು. ರೈತರ ಮರಣ ಶಾಸನ ಬರೆಯಲು ಮುಂದಾಗಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದು ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು. 

ದೇಶದ ರಾಜಧಾನಿಯಲ್ಲಿ ರೈತರು ಕಳೆದ 40 ದಿನಗಳಿಂದ ಪ್ರತಿಭಟನೆ ಮಾಡಿದರೂ ಕೇಂದ್ರದ ಬಿಜೆಪಿ ಸರ್ಕಾರ ಕಿವಿ ಕೇಳದ ಕಿವುಡನಂತೆ ಆಡಳಿತ ಮಾಡುತ್ತಿದೆ. 

ದೇಶದಲ್ಲಿ ರೈತರು ಸುರಕ್ಷತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಬಸವರಾಜು ವಿ ಶಿವಗಂಗಾ ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟವಾಗುತ್ತಿದೆ. ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. 

ಪೆಟ್ರೋಲ್, ಡಿಸೇಲ್, ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಎಲ್ಲಿದೆ ಅಚ್ಛೇ ದಿನ್ ಎಂದು ಪ್ರಶ್ನೆ ಮಾಡಿದರು. 

ದೇಶದಲ್ಲಿ ಬಡ ಜನರು ನೆಮ್ಮದಿಯಿಂದ ಬದುಕಲು ಕಾಂಗ್ರೆಸ್ ಸರ್ಕಾರ ಬರಬೇಕು, ಬಿಜೆಪಿ ಸರ್ಕಾರ ತೊಲಗಬೇಕು. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಅನಿವಾರ್ಯ ಎಂದರು. ಈ ವೇಳೆ ಕಿಸಾನ್ ಕಾಂಗ್ರೆಸ್ ಬೆಂಬಲಿತರು ನೂತನವಾಗಿ ಗ್ರಾಮ ಪಂಚಾಯ್ತಿಗೆ ಆಯ್ಕೆಯಾದ ಸದಸ್ಯರಿಗೆ ಬಸವರಾಜು ವಿ. ಶಿವಗಂಗಾ ಸನ್ಮಾನಿಸಿ, ಗೌರವಿಸಿ, ಜನಸೇವೆ ಮಾಡಬೇಕು ಎಂದು ತಿಳಿಸಿದರು. ಈ ವೇಳೆ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!