ಅಂತರ್ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ನಗರದಲ್ಲಿ ಆರಂಭ

ದಾವಣಗೆರೆ, ಜ.14- ಕ್ರೀಡೆ ಹಾಗೂ ವಿದ್ಯಾಭ್ಯಾಸ ಎರಡೂ ಸಹ ಉಜ್ವಲ ಭವಿಷ್ಯಕ್ಕೆ ಪೂರಕವಾಗಿದ್ದು, ಅತ್ಯವಶ್ಯಕವೂ ಕೂಡ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಮಯೂರ ಕ್ರಿಕೆಟ್ ಕ್ಲಬ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಇಂದಿನಿಂದ 6 ದಿನಗಳ ಆಹ್ವಾನಿತ ಅಂತರ್ ಜಿಲ್ಲಾ ಮಟ್ಟದ 16 ವರ್ಷದೊಳಗಿನ ಬಾಲಕರ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಬ್ಯಾಟ್ ಮಾಡುವ ಮೂಲಕ ಅವರು ಚಾಲನೆ ನೀಡಿದರು.

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ನಿಮ್ಮನ್ನು ನೀವು ತೊಡಗಿಸಿ ಕೊಂಡರೆ ಸರ್ವಾಂಗೀಣ ಅಭಿವೃದ್ಧಿ ಕಾಣಬಹುದಾಗಿದೆ. ಆದ್ದರಿಂದ ಎರಡನ್ನೂ ಸಹ ಸಮನಾಗಿ ಸ್ವೀಕರಿಸಿ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು. 

25 ಓವರ್‌ಗಳ ಪಂದ್ಯಾವಳಿಯಲ್ಲಿ ಆರಂಭದ ದಿನವಾದ ಗುರುವಾರ ಎಲ್ಲ ಆರು ತಂಡಗಳು ತಲಾ ಒಂದು ಪಂದ್ಯವನ್ನು ಆಡಿದವು. ಬೆಳಿಗ್ಗೆ ದಾವಣಗೆರೆಯ ಯುನೈಟೆಡ್ ಕ್ರಿಕೆಟ್ ಕ್ಲಬ್ ಮತ್ತು ಚಿತ್ರದುರ್ಗದ ಮದಕರಿ ಕ್ರಿಕೆಟ್ ಕ್ಲಬ್ ನಡುವೆ ನಡೆದ ಪ್ರಥಮ ಪಂದ್ಯದಲ್ಲಿ ಚಿತ್ರದುರ್ಗದ ಮದಕರಿ ತಂಡ 54 ರನ್ನುಗಳಿಂದ ಜಯಗಳಿಸಿತು.

ದಾವಣಗೆರೆ ಕ್ರಿಕೆಟ್ ಅಕಾಡೆಮಿ ಮತ್ತು ವೀನಸ್ ಕ್ರಿಕೆಟ್ ಅಕಾಡೆಮಿ ನಡುವೆ ನಡೆದ ಎರಡನೇ ಪಂದ್ಯದಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿ ಹುಡುಗರು 96 ಓಟಗಳಿಂದ ಜಯಭೇರಿ ಬಾರಿಸಿದರು. ತೌಫಿಕಿ ಅಹಮದ್ ಶತಕ ಸಿಡಿಸಿ ಎಲ್ಲರ ಗಮನ ಸೆಳೆದರು.

ತುಮಕೂರು ಮತ್ತು ಬಳ್ಳಾರಿ ತಂಡಗಳ ನಡುವೆ ನಡೆದ ಮತ್ತೊಂದು ಪಂದ್ಯದಲ್ಲಿ ತುಮಕೂರು ತಂಡ 112 ರನ್ ದಾಖಲಿಸಿದರೆ, ಬಳ್ಳಾರಿ ತಂಡ ಕೇವಲ 65 ರನ್ನುಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ತುಮಕೂರಿನ ನಿತಿನ್ 5 ಓವರ್ ನಲ್ಲಿ 14 ರನ್ ನೀಡಿ 6 ವಿಕೆಟ್ ಕಬಳಿಸಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಗೆದ್ದ ತಂಡಗಳಿಗೆ ತಲಾ 2 ಅಂಕ ದೊರೆಯಲಿದೆ. ಟೂರ್ನಿಯು ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯುತ್ತಿದೆ.

ಪಂದ್ಯಾವಳಿಯ ಚಾಲನೆ ವೇಳೆ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಅಯೂಬ್ ಪೈಲ್ವಾನ್, ಎಲ್.ಎಂ. ಪ್ರಕಾಶ್, ತುಮಕೂರು ಲೋಕೇಶ್, ಕೆ. ಶಶಿಧರ್, ಅಶೋಕ್, ಮೋಹನ್ ರಾವ್, ಅನಿಲ್, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಸಿರಿಗೆರೆ ಉಮೇಶ್ ಸೇರಿದಂತೆ ಇತರರು ಇದ್ದರು.

error: Content is protected !!