ದಾವಣಗೆರೆ, ಜ.14- ಕೊರೊನಾ ನಡುವೆಯೂ ನಗರದಲ್ಲಿ ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಪರಿಸರದ ಮಡಿಲಿನಲ್ಲಿ ಕುಟುಂಬಸ್ಥರು, ನೆಂಟರಿಷ್ಟರೊಡಗೂಡಿ ಹಬ್ಬದೂಟದ ಸವಿಯೊಂದಿಗೆ ಹಬ್ಬವನ್ನು ಸಂತಸದಿಂದ ಆಚರಿಸಿದರು.
ಹಬ್ಬಕ್ಕಾಗಿ ಕಬ್ಬಿನ ತುಂಡು, ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳನ್ನು ದೇವರ ಮುಂದೆ ಇಟ್ಟು ವಿಶೇಷ ಪೂಜೆ ಮಾಡಿದರು. ಬಳಿಕ ಮನೆಯ ಮಂದಿ, ಸಂಬಂಧಿಕರು ಹಾಗೂ ಸ್ನೇಹಿತರಿಗೆ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಒಣ ಕೊಬ್ಬರಿ, ಶೇಂಗಾ, ಹುರಿಗಡಲೆ, ಬೆಲ್ಲದ ಅಚ್ಚುಗಳ ಮಿಶ್ರಣವನ್ನು ಮೆಲ್ಲುತ್ತಾ ಶುಭಾಶಯ ಕೋರಿದರು.
ಹಬ್ಬದ ಸಂಭ್ರಮಾಚರಣೆ ಮುಂದೆ ಕೊರೊನಾ ಭಯ ಮಾಯವಾಗಿತ್ತು. ಜನರು ಕೊರೊನಾವನ್ನು ಲೆಕ್ಕಿಸದೇ ಅದನ್ನು ಮರೆತು ಹಬ್ಬದ ಖುಷಿ ಅನುಭವಿಸಿದರು. ಹಚ್ಚ ಹಸಿರಿನ ಸೌಂದರ್ಯದ ನಡುವೆ ಹಬ್ಬದ ಗುಂಗಿನಲ್ಲಿ ಮಿಂದೆದ್ದರು. ಕೊರೊನಾಗೆ ಸವಾಲೆನಿಸುವಂತೆ ಜನ ಹಬ್ಬವನ್ನಾಚರಿಸಿದರು. ನಗರದ ಕೆಲ ಉದ್ಯಾನವನಗಳಲ್ಲಿ ಜನಜಂಗುಳಿ ಮತ್ತು ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ಮುಂಜಾಗ್ರತಾ ಕ್ರಮಗಳ ಪಾಲಿಸದೇ ಹಬ್ಬದ ಸಂಭ್ರಮದಲ್ಲಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಖಡಕ್ ರೊಟ್ಟಿ, ಚಪಾತಿ, ಪುಂಡಿ ಸೊಪ್ಪಿನ ಪಲ್ಯ, ಎಣಗಾಯಿ ಪಲ್ಯ, ಚಟ್ನಿ ಪುಡಿ, ಚಿತ್ರನ್ನ, ಸಿಹಿ ಪೊಂಗಲ್, ಮೊಸರನ್ನ ಬುತ್ತಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಮಾಡಿಕೊಂಡು ಕುಟುಂಬ ಸಮೇತ ಪ್ರವಾಸಿ ತಾಣಗಳು, ಉದ್ಯಾನಗಳಿಗೆ ತೆರಳಿ ಒಟ್ಟುಗೂಡಿ ಭೋಜನ ಸವಿಯುವ ಮೂಲಕ ಸಂಭ್ರಮಿಸಿದರು.
ಉದ್ಯಾನವನಗಳಲ್ಲಿ ಕಳೆ ಕಟ್ಟಿದ ಸಂಭ್ರಮ: ಕೆಲವರು ತಮ್ಮ ಊರು, ಬಡಾವಣೆಗಳಿಗೆ ಸಮೀಪ ವಿರುವ ಉದ್ಯಾನವನಗಳಲ್ಲಿ ಹಬ್ಬದ ಸಂಭ್ರಮ ವನ್ನಾಚರಿಸಿದರೆ ಮತ್ತೆ ಕೆಲವರು ಗ್ಲಾಸ್ ಹೌಸ್ ಗೆ ತೆರಳಿ ಹಬ್ಬದ ಖುಷಿಪಟ್ಟರು. ಗಂಡ-ಹೆಂಡತಿ-ಮಕ್ಕಳು, ಸಹೋದರ-ಸಹೋದರಿಯರು ಸೇರಿದಂತೆ ಕುಟುಂಬ ಸಮೇತ ಹಬ್ಬದೂಟ ಸವಿದು ಕೆಲ ಕಾಲ ಮನರಂಜನೆ ಅನುಭವಿಸಿ ವಿರಮಿಸಿದರು. ಜನರು ಬಾಡಿಗೆ ಆಟೋಗಳು, ಸ್ವಂತ ವಾಹನ, ಕಾರು, ಬೈಕ್ ಗಳಲ್ಲಿ ಆಗಮಿಸಿದ್ದು ವಿಶ್ವೇಶ್ವರಯ್ಯ ಉದ್ಯಾನವನ, ಗ್ಲಾಸ್ ಹೌಸ್ ನಲ್ಲಿ ಕಂಡು ಬಂತು.
ಉದ್ಯಾನವನಗಳಲ್ಲಿ ಮಕ್ಕಳ ಆಟೋಟ ಸಂಭ್ರಮ ಕಳೆಕಟ್ಟಿತ್ತು. ಜೋಕಾಲಿ, ಜಾರಬಂಡಿ ಹಾಗೂ ಆಟಿಕೆಗಳು, ಪಾರ್ಕ್ ನಲ್ಲಿರುವ ಜಿಮ್ ಉಪಕರಣಗಳನ್ನು ಉಪಯೋಗಿಸಿ ಸಂತಸಪಟ್ಟರು. ಕೆಲ ಪೋಷಕರು, ಸಾರ್ವಜನಿಕರು ಮಕ್ಕಳ ಸಂಭ್ರಮ ಕಣ್ತುಂಬಿಕೊಂಡರೆ, ಮತ್ತೆ ಕೆಲವರು ಮಕ್ಕಳ ಜೊತೆ ಮಕ್ಕಳಾಗಿ ಆಟೋಟಗಳಲ್ಲಿ ಪಾಲ್ಗೊಂಡು ಸಂತಸಗೊಂಡರು.
ಸರ್ ಎಂ. ವಿಶ್ವೇಶ್ವರಯ್ಯ ಉದ್ಯಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜನ ಸಂಕ್ರಾಂತಿ ಹಬ್ಬದ ನಿಮಿತ್ತ ನಗರ ಸೇರಿದಂತೆ ಆನೆಕೊಂಡ, ಮಟ್ಟಿಕಲ್ಲು ಹಾಗೂ ವಿವಿಧೆಡೆಗಳಿಂದ ರೊಟ್ಟಿ, ಬುತ್ತಿ ಸೇರಿದಂತೆ ಹಬ್ಬದೂಟವನ್ನು ಕಟ್ಟಿಕೊಂಡು ಬಂದು ಹಸಿರಿನ ನಡುವೆ ಸುಂದರ ವಾತಾವರಣದಲ್ಲಿ ನೆಲದ ಮೇಲೆ ಚಾಪೆ, ಪ್ಲಾಸ್ಟಿಕ್ ಪಾಟ್, ಬೆಡ್ ಶೀಟ್ ಹಾಸಿಕೊಂಡು ಮನೆ ಮಂದಿ, ಕುಟುಂಬವು ಊಟ ಸವಿದದ್ದು ಸಾಮಾನ್ಯವಾಗಿತ್ತು.
ಕಾಸಲ್ ಶ್ರೀನಿವಾಸ ಶ್ರೇಷ್ಠಿ ಉದ್ಯಾನದಲ್ಲಿ ಜನರು ಇದ್ದರಾದರೂ ಹಬ್ಬದ ಸಂಭ್ರಮ ಕಡಿಮೆ ಇತ್ತು. ಮಕ್ಕಳ ಆಟೋಟ ಸಂಭ್ರಮ ಜೋರಾಗಿತ್ತು. ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಮಾತೃ ಛಾಯಾ ಚಿಣ್ಣರ ಉದ್ಯಾನವನದಲ್ಲಿ ಜನರು ಪ್ರವೇಶ ಶುಲ್ಕ ನೀಡಿ ಹಬ್ಬದ ಸಂಭ್ರಮ ಸವಿಯಬೇಕಾಯಿತು. ನಿಜಲಿಂಗಪ್ಪ ಬಡಾವಣೆಯ ಗಂಗೂಬಾಯಿ ಹಾನಗಲ್ ಉದ್ಯಾನವನದಲ್ಲಿ ಸಹ ಹಬ್ಬದ ಕಳೆ ಕಂಡು ಬಂತು. ಮಕ್ಕಳು ಆಟೋಟದಲ್ಲಿ ಮಿಂದೆದ್ದರು. ಗಂಡ-ಹೆಂಡತಿ-ಮಗು ಆಟದಲ್ಲಿ ತಲೀನರಾಗಿದ್ದು ಕಂಡು ಬಂತು. ಮಕ್ಕಳು ಮರವೇರಿ ಖುಷಿ ಪಟ್ಟರು.
ಗ್ಲಾಸ್ ಹೌಸ್ ನಲ್ಲಿ ಸಡಗರದ ಸಂಕ್ರಾಂತಿ: ಗ್ಲಾಸ್ ಹೌಸ್ ನಲ್ಲಿ ಸಂಕ್ರಾಂತಿ ಸಂಭ್ರಮ ಹೆಚ್ಚಾಗಿತ್ತು. ಜನಜಂಗುಳಿಯಿಂದ ಕೂಡಿತ್ತು. ಕುಂದವಾಡ, ಇಂಡಸ್ಟ್ರಿಯಲ್ ಏರಿಯಾ, ನಾಗನೂರು, ಹೊಸ ಕುಂದವಾಡ, ನಾಗೇನಹಳ್ಳಿ ಹೀಗೆ ಅನೇಕ ಕಡೆಗಳಿಂದ ಜನರು ಆಗಮಿಸಿದ್ದರು. ಬೆಳಗ್ಗೆಯಿಂದ ಸಂಜೆವರೆಗೂ ಸುಮಾರು 1500ಕ್ಕೂ ಹೆಚ್ಚು ದೊಡ್ಡವರು, 200ಕ್ಕೂ ಹೆಚ್ಚು ಮಕ್ಕಳು ಆಗಮಿಸಿ ಗ್ಲಾಸ್ ಹೌಸ್ ನ ಪರಿಸರದ ಸೌಂದರ್ಯ ವೀಕ್ಷಿಸಿ ಹಬ್ಬದೂಟವನ್ನು ಸವಿದರು. ಮಕ್ಕಳ ಆಟೋಟ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ನವ ಜೋಡಿಗಳು ನವ ಸಂಕ್ರಮಣವನ್ನು ಗ್ಲಾಸ್ ಹೌಸ್ ನಲ್ಲಿ ಕಳೆದರು. ಕೆಲ ಕುಟುಂಬಗಳು ಗ್ಲಾಸ್ ಹೌಸ್ ನಿಂದಾಚೆ ಮರದ ನೆರಳಲ್ಲಿ ಹಬ್ಬದ ಸವಿ ಸವೆಯುತ್ತಾ ಸಂಕ್ರಾಂತಿ ಸಂಭ್ರಮಿಸಿದರು.
ಕೊಂಡಜ್ಜಿ ಕೆರೆ, ದೇವರಬೆಳಕೆರೆ ಪಿಕ್ ಅಪ್ಗಳಿಗೂ ಭಾರೀ ಸಂಖ್ಯೆಯಲ್ಲಿ ಜನ ಕುಟುಂಬ ಸಮೇತ ತೆರಳಿ ಹಬ್ಬದ ಊಟ ಮಾಡಿದರು.
ಸೆಲ್ಫಿ-ಗ್ರೂಫಿ ಕ್ರೇಜ್: ಪೋಷಕರು ತಮ್ಮ ಮಕ್ಕಳ ಸಂಭ್ರಮವನ್ನು ಹಾಗೂ ಯುವಕ-ಯುವತಿಯರು, ಕುಟುಂಬದ ಸದಸ್ಯರು, ನವ ವಧು-ವರರು ಹಬ್ಬದ ಸಂಭ್ರಮದ ಸಂತಸದ ಕ್ಷಣವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದರು. ಸೆಲ್ಫಿ ಮತ್ತು ಗ್ರೂಫಿಯಾಗಿ ಛಾಯಾಚಿತ್ರಗಳ ಸೆರೆ ಹಿಡಿಯುವ ಸಡಗರ ವಿಶ್ವೇಶ್ವರಯ್ಯ ಪಾರ್ಕ್, ಗ್ಲಾಸ್ ಹೌಸ್ ನಲ್ಲಿ ಕಂಡುಬಂತು.
ಕೆರೆಗಳಲ್ಲಿ ಹಬ್ಬದಾಚರಣೆ ನಿಷೇಧ: ನಗರದ ಟಿವಿ ಸ್ಟೇಷನ್ ಕೆರೆ ಹಾಗೂ ಕುಂದವಾಡ ಕೆರೆಯಲ್ಲಿ ಹಬ್ಬದ ಸಂಭ್ರಮಾಚರಣೆಗೆ ಅವಕಾಶ ನೀಡದೇ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಹಬ್ಬ ದೂಟದೊಂದಿಗೆ ಕುಟುಂಬ ಸಮೇತ ಆಗಮಿಸಿ ಸಂಭ್ರಮಿಸುವ ಆಸೆ ಹೊತ್ತು ಬಂದಿದ್ದ ಕೆಲ ಸಾರ್ವಜನಿಕರು ಅವಕಾಶ ನೀಡದೇ ಗೇಟ್ ಗೆ ಬೀಗ ಹಾಕಿದ್ದು ಕಂಡು ವಾಪಸ್ ಬೇರೆ ಕಡೆ ದಾರಿ ಹಿಡಿದಿದ್ದು ಟಿವಿ ಸ್ಟೇಷನ್ ಕೆರೆ ಬಳಿ ಕಂಡು ಬಂತು.