ಲಿಂಗಾಯತ ಸಮಾಜಕ್ಕೆ ಕೇಂದ್ರ ಒಬಿಸಿ ಸೌಲಭ್ಯ ನೀಡಬೇಕು

ಹರಿಹರ, ಜ.14-  ದೇಶದಲ್ಲಿ ಲಿಂಗಾಯತ ಸಮಾಜದವರು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಕೇಂದ್ರ ಸರ್ಕಾರವು ರಾಜ್ಯದ ಲಿಂಗಾಯತ ಸಮುದಾಯಕ್ಕೆ ಒಬಿಸಿ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ನಗರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಹರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಇಂದು ಮಧ್ಯಾಹ್ನ ನಡೆದ ಭೂ ತಪಸ್ವಿ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

ರಾಜ್ಯದ ಲಿಂಗಾಯತ ಸಮಾಜ ದವರು ಶೇ 90 ರಷ್ಟು ಕೃಷಿಯನ್ನು ಅವಲಂ ಬಿಸಿದ್ದಾರೆ. ಆದ್ದರಿಂದ ರೈತರು ಆಧುನಿಕ ಕೃಷಿ ಪದ್ಧತಿ ಮತ್ತು ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೋದಾಗ ರೈತರ ಬದುಕು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತದೆ.  ರಾಜ್ಯದ ಪಂಚಮಸಾಲಿ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿರುವ ಸಮಾಜವಾಗಿದೆ ಎಂದು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ಭೂ ತಪಸ್ವಿ ಸಮಾವೇಶ ಉದ್ಘಾ ಟನೆ ಮಾಡಿ ಮಾತನಾಡಿ, ದೇಶದ ಬೆನ್ನೆ ಲುಬು ರೈತರು ಅಂತ ಹೇಳುತ್ತಾರೆ. ಆದರೆ ರೈತರ ಪರಿಸ್ಥಿತಿ ಬಹಳ ಅಧೋಗತಿಯತ್ತ ಸಾಗುತ್ತಿದೆ. ಸರಿಯಾದ ಸಮಯದಲ್ಲಿ ಮಳೆ ಇಲ್ಲದೆ ಮತ್ತು ಸಮಯವಲ್ಲದ ಸಮಯ ದಲ್ಲಿ ಹೆಚ್ಚಾಗಿ ಮಳೆ ಬಂದು ರೈತರ ಜೀವನ ವನ್ನು ದುಸ್ತರ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದರು.

ಬೆಳೆ ಹಾಳಾದ ಸಂದರ್ಭದಲ್ಲಿ ಅದಕ್ಕೆ ತಕ್ಕಂತೆ ಸರ್ಕಾರದಿಂದ ಪರಿಹಾರ ಸಿಗದೆ ಇರುವುದು ಸಹ ರೈತರು ಸಂಕಷ್ಟ ಅನುಭವಿಸಲು ಕಾರಣ, ಕೇಂದ್ರ ಸರ್ಕಾರ ಎಪಿಎಂಸಿ ಸೇರಿದಂತೆ ಅನೇಕ ಕಾಯ್ದೆ ಗಳನ್ನು ತಿದ್ದುಪಡಿ ಮಾಡಲಿಕ್ಕೆ ಹೊರಟಿದ್ದ ರಿಂದ ಅದನ್ನು ತಡೆಗಟ್ಟಲು ರೈತರು ಸಾಕಷ್ಟು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಬಂದಿತು ಎಂದರು. 

ಲಿಂಗಾಯತ ಸಮಾಜದ ಒಳ ಪಂಗಡದ ಎಲ್ಲಾ ಮಠಾಧೀಶರು ಒಟ್ಟಿಗೇ ಕುಳಿತು ಚರ್ಚೆ ಮಾಡಿದಾಗ ಮಾತ್ರ ವೀರ ಶೈವ ಲಿಂಗಾಯತ ಸಮಾಜದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಸಮಾಜದಲ್ಲಿನ ಜನರೂ ಸಹ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ದಿಕ್ಸೂಚಿ ಭಾಷಣದಲ್ಲಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನಾಡಿನಲ್ಲಿ ಬಹುಸಂಖ್ಯೆಯಲ್ಲಿ ಇರುವ ಪಂಚಮಸಾಲಿ ಸಮುದಾಯಕ್ಕೆ 4 ಮಂತ್ರಿ ಗಳ ಭಾಗ್ಯ ದೊರೆಯಬೇಕು ಎಂದರು.

ಪದವಿ ಪಡೆದವರು ಪಂಚಮಸಾಲಿ ಸಮಾಜದ ಕೆಳವರ್ಗದ ಜನರನ್ನು ಮೇಲೆ ತರುವ ಕೆಲಸವನ್ನು ಮಾಡಬೇಕು. ಪಂಚಮಸಾಲಿ ಸಮಾಜದ ಗುರುಗಳು ತಮ್ಮ ಸಮಾಜದವರು ಬರಿ ಮಂತ್ರಿ ಆಗಲಿ ಎಂಬ ಬಗ್ಗೆ ಆಸಕ್ತಿ ತೋರಿಸುವುದಕ್ಕಿಂತ  ಕೆಳ ಹಂತದಲ್ಲಿ ಇರುವಂತಹ ಸಮಾಜದ ಜನರಿಗೆ ಶಿಕ್ಷಣ, ಸಂಸ್ಕಾರ, ನೀಡಿದಾಗ ಅದ ರಿಂದ ಹೆಚ್ಚು ಗೌರವ ಬರುತ್ತದೆ ಎಂದರು.

ಹಿಂದೆ ಪಂಚಮಸಾಲಿ ಸಮಾಜದ ಎಸ್. ನಿಜಲಿಂಗಪ್ಪ, ಜೆ.ಹೆಚ್. ಪಟೇಲ್ ಸೇರಿದಂತೆ, ಅನೇಕ ಮಹಾನ್ ವ್ಯಕ್ತಿಗಳು ಅವರಿಗೆ ಇದ್ದ ಸಮಾಜದ ಕಳಕಳಿ, ಸತ್ಯ, ನಿಷ್ಠೆ, ಶುದ್ಧ ಹಸ್ತ, ಇವುಗಳಿಂದ ರಾಜ್ಯ ಮತ್ತು ದೇಶದಲ್ಲಿ ಹೆಸರನ್ನು ಗಳಿಸಿದರು. ಅದರಂತೆ ಇಂದಿನ ಯುವಕರು ಅವರಂತೆ ಸತ್ಯ, ನಿಷ್ಠೆ ಶ್ರದ್ಧೆಯಿಂದ ಪ್ರಗತಿಯನ್ನು ಕಾಣಬೇಕು ಎಂದರು.

`ಪಂಚವಾಣಿ’ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಭಾರತ ದೇಶವು ಸಂಸ್ಕೃತಿ ಮತ್ತು ಸಂಸ್ಕಾರ, ಪರಂಪರೆಗಳಿಂದ ಜಗತ್ತಿಗೇ ಮಾದರಿ ದೇಶವಾಗಿದೆ. ಇದನ್ನು ಇಷ್ಟು ವರ್ಷಗಳ ಕಾಲ ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗಲಿಕ್ಕೆ ಎಲ್ಲಾ ಮಠಾದೀಶ್ವರರು ಕಾರಣ. ಪಂಚಮಸಾಲಿ ಸಮಾಜ ಒಗ್ಗಟ್ಟಾಗಿ ಇದ್ದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಸಾಗುವಂತಾಗಲಿ ಎಂದು ಹೇಳಿದರು.

ಇಳಕಲ್ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಶಿವಯೋಗಿಗಳು, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಬಿ. ನಾಗನಗೌಡ್ರು ವಹಿಸಿದ್ದರು. ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್, ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಬಸವರಾಜ್ ದಿಂಡೂರು, ಶಾಸಕ ಅರುಣ್ ಕುಮಾರ್ ಪೂಜಾರ್ ಮತ್ತು ಇತರರು ಹಾಜರಿದ್ದರು.

ಚಿದಾನಂದ ಕಂಚಿಕೇರಿ,
[email protected]

error: Content is protected !!