40 ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಿಗರೇ ನಿರ್ಣಾಯಕರು

ರಾಣೇಬೆನ್ನೂರಿನಲ್ಲಿನ ಬಿಜೆಪಿ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌

ರಾಣೇಬೆನ್ನೂರು, ಜ.13-  ರಾಜ್ಯದಲ್ಲಿ ನಲವತ್ತು ಲಕ್ಷ ಜನಸಂಖ್ಯೆ ಹೊಂದಿರುವ ಮರಾಠರು ರಾಜ್ಯದ ನಲವತ್ತು ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿದ್ದು, ಅಲ್ಪಸಂಖ್ಯಾ ತರಾದ ನಾವು, ಅಸಂಘಟಿತರಾಗಿ ರುವುದರಿಂದ ಎಲ್ಲೆಡೆ ವಂಚಿತರಾಗಿ ದ್ದೇವೆ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್‌ ತಿಳಿಸಿದ್ದಾರೆ.

ಇಲ್ಲಿನ ತುಕ್ಕಾಭವಾನಿ ಸಭಾಭವನದಲ್ಲಿ ಇಂದು ಏರ್ಪಾಡಾಗಿದ್ದ ರಾಣೇಬೆನ್ನೂರು ತಾಲ್ಲೂಕಿನ ಗ್ರಾ.ಪಂ. ಚುನಾವಣೆಯಲ್ಲಿ  ಆಯ್ಕೆಯಾದ ಮರಾಠ ಸಮಾಜದ 20 ಸದಸ್ಯರನ್ನು ಸನ್ಮಾನಿಸಿ, ಅವರು ಮಾತನಾಡಿದರು.       

ಬೆಳಗಾವಿಯ ಕೆಲವರು ವಿರೋಧ ಮಾಡಿದಾಕ್ಷಣ ನಾವು ಮರಾಠಿಗರಾಗಲ್ಲ. ನಾವು, ನಮ್ಮ ಅಜ್ಜ ಮುತ್ತಜ್ಜರೆಲ್ಲ ಇಲ್ಲಿಯೇ ಹುಟ್ಟಿದವರು. ಇಲ್ಲಿಯೇ ಸಾಯುವವರು‌. ನಾವೆಲ್ಲ ಕನ್ನಡಿಗರೇ. ಪ್ರಾಧಿಕಾರವನ್ನು ವಿರೋಧಿಸುವವರ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕು. ನಾವು ಸಂಘಟಿತರಾಗಲು ಈಗ ಒಳ್ಳೆಯ ಕಾಲ ಬಂದಿದೆ. ಆ ಮೂಲಕ ಮೀಸಲಾತಿ ಪಡೆಯಬೇಕು ಎಂದು ಜಾಧವ್ ಹೇಳಿದರು.

ನೀವು ಯಾವ ಪಕ್ಷದವರಾದರೂ ಸಹ ಅಲ್ಲಿ ನಿಮ್ಮ ಶಕ್ತಿ ಬೆಳೆಸಿಕೊಳ್ಳಿ. ನಿಮಗೆ ಜನತೆ ಈಗ ಕೊಟ್ಟಿರುವ ಅಧಿಕಾರವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಮುಖಂಡತ್ವ ಬೆಳೆಸಿಕೊಂಡು ಸಮಾಜ ಸಂಘಟನೆ ಮಾಡಿರಿ ಎಂದು ಯಶವಂತರಾವ್ ಸನ್ಮಾನಿತ ರಿಗೆ ಕಿವಿಮಾತು ಹೇಳಿದರು.

 ವೇದಿಕೆಯಲ್ಲಿ ಮಹಿಳಾ ಅಧ್ಯಕ್ಷೆ ನಾಗವೇಣಿ ಪವಾರ್, ನಿವೃತ್ತ ಡಿವೈಎಸ್‌ಪಿ,  ಎಂ.ಎಸ್. ಜಾಧವ್‌, ಪವಿತ್ರ ನಾಗೇನಹಳ್ಳಿ ಇನ್ನಿತರರಿದ್ದರು. ಪ್ರಾಸ್ತಾವಿಕವಾಗಿ ಶಿವಮೂರ್ತಿ ದಿಲ್ಲಿವಾಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಕೆ. ರಾಜನಹಳ್ಳಿ ಸ್ವಾಗತಿಸಿದರು.  ವಿಷ್ಣು ಗಾವಡೆ ವಂದಿಸಿದರು.

error: Content is protected !!